ತೀರ್ಥಹಳ್ಳಿ ತಹಶೀಲ್ದಾರ್ ಲಾಡ್ಜ್‌ನಲ್ಲಿ ಸಾವು

jakanna
Published on

ಬೆಂಗಳೂರು: ಕೋರ್ಟ್ ಕೆಲಸಕ್ಕೆಂದು ನಗರಕ್ಕೆ ಆಗಮಿಸಿದ್ದ ತೀರ್ಥಹಳ್ಳಿ ತಹಶೀಲ್ದಾರ್ ಲಾಡ್ಜ್‌ವೊಂದರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಗದಗ ಮೂಲದ ಜಕ್ಕಣ್ಣ ಗೌಡರ್(೫೬) ಮೃತಪಟ್ಟವರು.
ತೀರ್ಥಹಳ್ಳಿ ತಹಶೀಲ್ದಾರ್ ಆಗಿದ್ದ ಜಕ್ಕಣ್ಣಗೌಡರ್ ಅವರು ಕೋರ್ಟ್ ಕೆಲಸಕ್ಕೆಂದು ನಗರಕ್ಕೆ ಆಗಮಿಸಿ ಕಪಾಲಿ ಥಿಯೇಟರ್ ಸಮೀಪದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಆದರೆ ರಾತ್ರಿ ೮.೩೦ ಸುಮಾರಿಗೆ ರೂಮ್ನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಹಜಸಾವು ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಇನ್ನೂ ಕೈಸೇರಿಲ್ಲ. ಆದರೆ ಇದೊಂದು ಸ್ವಾಭಾವಿಕ ಸಾವು ಎಂದು ವೈದ್ಯರು ಹೇಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋರ್ಟ್ ಕೆಲಸಕ್ಕೆಂದು ನಗರಕ್ಕೆ ಬಂದಿದ್ದ ಜಕ್ಕಣ್ಣ ಗೌಡರ್ ಅ.೧೪ರಂದು ಖಾಸಗಿ ಲಾಡ್ಜ್ ಬುಕ್ ಮಾಡಿದ್ದರು. ಆದರೆ ಬುಧವಾರ ಬೆಳಗ್ಗೆಯಿಂದ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಕೂಡಲೇ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ತೀರ್ಥಹಳ್ಳಿ ಪೊಲೀಸರು ಕೂಡಲೇ ಬೆಂಗಳೂರು ಪೊಲೀಸರಿಗೆ ಸಂಪರ್ಕ ಮಾಡಿದ್ದಾರೆ. ನಂತರ ರಾತ್ರಿ ೮.೩೦ ಕ್ಕೆ ಲಾಡ್ಜ್‌ಗೆ ಉಪ್ಪಾರಪೇಟೆ ಪೊಲೀಸರು ಭೇಟಿ ನೀಡಿ, ರೂಮ್ ಬಾಗಿಲು ತೆರೆಸಿ ನೋಡಿದ್ದಾಗ ಜಕ್ಕಣ್ಣ ಗೌಡರ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net