

ಹೊಸ ವರ್ಷದ ಅಂಗವಾಗಿ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಭಕ್ತರಿಗೆ 2 ಲಕ್ಷ ತಿರುಪತಿ ಮಾದರಿಯ ಲಡ್ಡುಗಳನ್ನು ವಿತರಿಸಲಾಯಿತು.
ಮುಂಜಾನೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಯೋಗಾನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀರಂಗಂ ಕ್ಷೇತ್ರ, ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ ‘ತೋಮಾಲೆ’ ಮತ್ತು ‘ಸ್ವರ್ಣ’ ಪುಷ್ಪದಿಂದ ಶ್ರೀಸ್ವಾಮಿಗೆ ‘ಸಹಸ್ರನಾಮರ್ಚನೆ’ ಮಾಡಲಾಯಿತು.
ಯೋಗಾನರಸಿಂಹಸ್ವಾಮಿ, ಪದ್ಮಾವತಿ, ಮಹಾಲಕ್ಷ್ಮೀ, ಉತ್ಸವ ಮೂರ್ತಿಗಳಿಗೆ ಏಕದಶ ಪ್ರಾಕಾರೋತ್ಸವ, 50 ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮಾಡಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನ ಮಾಡಲು ಅನುವು ಮಾಡಿಕೊಡಲಾಯಿತು. ಭಕ್ತರು ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆಯುವುದರ ಜತೆಗೆ, ಲಡ್ಡು ಪ್ರಸಾದ ಸ್ವೀಕರಿಸಿದರು.
1994ರಲ್ಲಿ ಹೊಸ ವರ್ಷದ ಪ್ರಯುಕ್ತ ಮೊದಲ ಬಾರಿಗೆ ಭಕ್ತರಿಗೆ ಒಂದು ಸಾವಿರ ಲಡ್ಡು ವಿತರಿಸಲಾಗಿತ್ತು. ಬಳಿಕ ಅದನ್ನು ಪ್ರತಿವರ್ಷವೂ ಮುಂದುವರಿಸಿಕೊಂಡು ಬರಲಾಗಿದೆ. ಈ ಬಾರಿ 150 ಗ್ರಾಂ ತೂಕದ 2 ಲಕ್ಷ ಲಡ್ಡು, ಜತೆಗೆ 2 ಕೆ.ಜಿ., 10 ಕೆ.ಜಿ. ತೂಕ ಲಡ್ಡು, ವಿತರಿಸಲಾಯಿತು.