ತಿನ್ನಲು ಮುದ್ದೆ ಇಲ್ಲದ ಅಮಾಯಕರೇ ಬೇಕಿತ್ತಾ....

Darshan
Published on

ಚಿತ್ರದುರ್ಗ: ತಿನ್ನುವ ಮುದ್ದೆಗೂ ಕಷ್ಟಪಡುವ ಬಡ ಯುವಕರನ್ನು ಬಾವಿಗೆ ತಳ್ಳುವ ನೀಚ ಬುದ್ಧಿ ಏಕೆ? ದುಡಿಮೆ ಮಾಡಿ ಬದುಕುವ ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸಿದ್ದು, ಸರಿಯೇ?….

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಮತ್ತೊಬ್ಬ ಆರೋಪಿ ಚಿತ್ರದುರ್ಗದ ಅನಿಲ್‌ಕುಮಾರ್ ಆಲಿಯಾಸ್ ಅನು ತಾಯಿ ಗೋಳಾಡಿದ ಪರಿ ಇದು.

ನನ್ನ ಮಗ ಕೊಲೆ ಮಾಡುವ ಹಂತಕ್ಕೆ ಹೋಗುವವನಲ್ಲ. ನಾವೂ ಅನಕ್ಷರಸ್ಥರಾದರೂ ದುಡಿದು ತಿನ್ನುವುದನ್ನು ಮಗನಿಗೆ ಕಲಿಸಿದ್ದೇವೆ. ಆದರೆ, ಈ ಕೊಲೆ ಪ್ರಕರಣದಲ್ಲಿ ಅವನ ಹೆಸರು ಕೇಳಿಬಂದಿರುವುದು ನಮಗೆ ಅಘಾತ ಉಂಟು ಮಾಡಿದೆ ಎಂದು ಬಿಕ್ಕಿ-ಬಿಕ್ಕಿ ಕಣ್ಣೀರು ಸುರಿಸಿದರು.

ದೇವರಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಮಗ ವಾರವಾದರೂ ಹಿಂದಿರುಗಿಲ್ಲ. ಮೋಸ ಮಾಡಿ ಕರೆದುಕೊಂಡು ಹೋಗಿ ಸಿಲುಕಿಸಿದ್ದಾರೆ. ಅಮಾಯಕರನ್ನು ಬಲಿಯಾಕುವ ಕುತಂತ್ರ ಇರಬಹುದು ಎಂದು ಕಿಡಿಕಾರಿದರು.

ಹೊಳಲ್ಕೆರೆ ರಸ್ತೆಯ ಸಿಹಿನೀರು ಹೊಂಡ ಬೀದಿಯ ಮುರಿದ ಅಂಚಿನ ಚಿಕ್ಕ ಮನೆ ನಮ್ಮದು. ನನಗೆ ನಾಲ್ವರಲ್ಲಿ ಮೂವರು ಪುತ್ರರಿದ್ದು, ಒಬ್ಬ ಪುತ್ರಿ ಇದ್ದಾಳೆ. ಅನು ಮೂರನೇ ಮಗ. ನಾನೂ ಮನೆ ಕೆಲಸ ಮಾಡುತ್ತೇನೆ. ಅನುಕೂಲಸ್ಥರಾಗಿದ್ದರೆ, ಈ ರೀತಿ ಕಷ್ಟದಲ್ಲಿ ಏಕೆ ಜೀವನ ಸಾಗಿಸಬೇಕಿತ್ತು ಎಂದು ಗೋಳಾಡಿದರು.

ಮೊದಲು ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಪಾಲಕರಿಂದ ಹಣ ನೀಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಸ್ವಂತವಾಗಿ ಬದುಕು ಕಟ್ಟಿಕೊಳ್ಳಲು ಆಟೋ ಖರೀದಿಸಿ, ಚಾಲಕ ವೃತ್ತಿಯಲ್ಲಿ ತೊಡಗಿದ್ದ. ಅದು ಬಿಟ್ಟರೆ ಇನ್ಯಾವ ಕೆಲಸ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net