ತಾಲೂಕು ಸರ್ಕಾರಿ ನೌಕರ ಸಂಘಕ್ಕೆ ಮಂಜುನಾಥ್ ಅಧ್ಯಕ್ಷ

10KDR1 manjunath
ಎಂ.ಬಿ.ಮಂಜುನಾಥ್
Published on

ಕಡೂರು: ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ಶಿಕ್ಷಕ ಎಂ.ಬಿ.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದರು.

ಇತ್ತೀಚೆಗೆ 34 ನಿರ್ದೇಶಕರ ಸ್ಥಾನಗಳ ಆಯ್ಕೆ ನಡೆದಿದ್ದು 24 ನಿರ್ದೇಶಕರು ವಿವಿಧ ಇಲಾಖೆಗಳಿಂದ ಅವಿರೋಧವಾಗಿ ಮತ್ತು 10 ಸ್ಥಾನಗಳಿಗೆ ಚುನಾವಣೆ ಮೂಲಕ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಜಿ.ರೇವಣ್ಣ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ ಎಂ.ಬಿ.ಮಂಜುನಾಥ್ ಮಾತನಾಡಿ, ನೌಕರರ ಸಹಕಾರ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಶಾಸಕ ಕೆ.ಎಸ್.ಆನಂದ್ ಪರೋಕ್ಷ ಬೆಂಬಲ ಸಂಘದ ನೂತನ ಸಮಿತಿ ರಚನೆಯಲ್ಲಿ ಅವಿರೋಧವಾಗಿ ಆಯ್ಕೆಗೊಳ್ಳಲು ಸಹಕಾರಿಯಾಗಿದ್ದು, ನೌಕರರ ಹಿತ ಕಾಪಾಡುವಲ್ಲಿ ಸಂಘ ನಿರಂತರವಾಗಿ ಶ್ರಮಿಸಲಿದೆ ಎಂದರು.

6 ತಿಂಗಳಿಗೊಮ್ಮೆ ಸದಸ್ಯರ ಸಭೆ ಕರೆದು ಆಯವ್ಯಯ ಮಂಡಿಸುತ್ತೇನೆ. ಕಡೂರು-ಬೀರೂರು ಶೈಕ್ಷಣಿಕ ವಲಯದ ಹಿಂದುಳಿದ ಶಾಲೆಗಳನ್ನು ಗುರುತಿಸಿ ಶಾಲೆಯ ಭೌತಿಕ ಸ್ಥಿತಿ ಉತ್ತಮಪಡಿಸಲು ಹಾಗೂ ಶೈಕ್ಷಣಿಕಾಭಿವೃದ್ಧಿ ಕೆಲಸಗಳಿಗೆ ಶ್ರಮಿಸುತ್ತೇನೆ. ಎಲ್ಲ ಸರ್ಕಾರಿ ನೌಕರರಿಗೆ ಉಚಿತ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುತ್ತೇವೆ. ಎನ್‌ಪಿಎಸ್ ನೌಕರರ ಧ್ವನಿಯಾಗಿ ಒಪಿಎಸ್ ಪಡೆದುಕೊಳ್ಳುವಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ರುದ್ರೇಶ್ (ಪ್ರಧಾನ ಕಾರ್ಯದರ್ಶಿ), ಟಿ.ಎಂ.ರಾಜಶೇಖರ್(ಖಜಾಂಚಿ), ಕೆ.ಆರ್.ಸುರೇಶ್ (ರಾಜ್ಯ ಪರಿಷತ್ ಸದಸ್ಯ) ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನಿರ್ದೇಶಕರಾದ ಬಿ.ಜೆ.ಜಗದೀಶ್, ಬೈರೇಗೌಡ, ಮುರಳಿ, ಅಶೋಕ್, ಎಚ್.ಜಿ.ರಾಜು, ಶಿಕ್ಷಕರಾದ ಧನಪಾಲನಾಯ್ಕ, ಹರೀಶ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹರೀಶ್ ಅಗ್ನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net