ತಾಯಿ ಹಾಲು ಮಗುವಿಗೆ ಸಮಗ್ರ ಆಹಾರ

HUN-AUG-6-1{ROTARY PROGRAMME}
ಹುಣಸೂರು ತಾಲೂಕು ಮೂಕನಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ರೋಟರಿ ಸಂಸ್ಥೆ ಮತ್ತು ಇನ್ನರ್‌ವ್ಹೀಲ್ ಸಹಯೋಗದಲ್ಲಿ ರಾಷ್ಟ್ರೀಯ ಸ್ತನ್ಯಪಾನ ಕಾರ್ಯಕ್ರಮದಲ್ಲಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ಪದಾರ್ಥ ವಿತರಿಸಲಾಯಿತು. ರೊ.ಚನ್ನಕೇಶವ, ಪ್ರಸನ್ನಕುಮಾರ್, ಡಾ.ಸಂಗೀತಾ, ಸ್ಮಿತಾ ದಯಾನಂದ್, ಜಯಲಕ್ಷ್ಮೀ ಇತರರಿದ್ದರು.
Published on

ಹುಣಸೂರು: ತಾಯಿ ಹಾಲು ಮಗುವಿಗೆ ಸಂಜೀವಿನಿಯಾಗಿದ್ದು, ಕನಿಷ್ಟ 6 ತಿಂಗಳವರೆಗೆ ನೀಡುವುದು ಕಡ್ಡಾಯ ಎಂದು ಪ್ರಸೂತಿ ತಜ್ಞೆ ಡಾ.ಸಂಗೀತಾ ಹೇಳಿದರು.

ಹುಣಸೂರು ರೋಟರಿ ಸಂಸ್ಥೆ ಮತ್ತು ಇನ್ನರ್‌ವ್ಹೀಲ್ ಸಹಯೋಗದಲ್ಲಿ ರಾಷ್ಟ್ರೀಯ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಶನಿವಾರ ತಾಲೂಕಿನ ಮೂಕನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಸ್ತನ್ಯಪಾನ ಮತ್ತು ಅದರ ಮಹತ್ವ ಕುರಿತಾದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಿಸುವ, ಸದೃಢ ಬೆಳೆವಣಿಗೆಗೆ ಮೂಲ ಕಾರಣ ತಾಯಿ ಹಾಲು ಎನ್ನುವುದನ್ನು ಬಹುತೇಕ ತಾಯಂದಿರು ಮರೆತಿದ್ದಾರೆ. ತಾಯಿ ಹಾಲು ಮಗುವಿಗೆ ಸಮಗ್ರ ಆಹಾರವಾಗಿರುತ್ತದೆ. ಅದರಲ್ಲಿ ಅಗತ್ಯ ಪ್ರೋಟೀನ್, ಕಾರ್ಬೋಹೈಡ್ರೆಟ್ಸ್, ಫ್ಯಾಟ್, ವಿಟಮಿನ್ಸ್ ಮತ್ತು ಮಿನರಲ್ಸ್ ಇದ್ದು, ಮಗುವಿನ ಬುದ್ಧಿಮತ್ತೆ ವೃದ್ಧಿಸಲು ಸಹಾಯಕಾರಿಯಾಗಿದೆ. ಹಾಲು ಉಣಿಸುವುದರಿಂದ ಕೇವಲ ಮಗುವಿಗೆ ಮಾತ್ರವಲ್ಲ, ತಾಯಿಗೂ ಲಾಭವಿದೆ. ಸಮರ್ಪಕವಾಗಿ ಹಾಲು ಉಣಿಸುವ ತಾಯಂದಿರು ಸ್ತನ್ಯ ಮತ್ತು ಒವೇರಿಯನ್ ಕ್ಯಾನ್ಸರ್‌ನಿಂದ ಪಾರಾಗಬಹುದು. ಅಲ್ಲದೆ ಮಧುಮೇಹ ಮತ್ತು ಹೃದಯಸಂಬಂಧಿ ಕಾಯಿಲೆಗಳಿಂದ ದೂರವಾಗಬಹುದು. ಹೀಗಾಗಿ ತಾಯಂದಿರು ಆಧುನಿಕತೆಯ ಮೋಹಕ್ಕೆ ಬಲಿಯಾಗದೆ ಹಾಲು ನೀಡಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಬಾಣಂತಿಯರಿಗೆ ಮೊಟ್ಟೆ, ಮೊಳಕೆಕಾಳುಗಳು, ಬ್ರೆಡ್ ಮತ್ತು ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ರೋಟರಿ ಅಧ್ಯಕ್ಷ ರೊ.ಚನ್ನಕೇಶವ, ಕಾರ್ಯದರ್ಶಿ ಪ್ರಸನ್ನಕುಮಾರ್, ಇನ್ನರ್‌ವ್ಹೀಲ್‌ನ ಅಧ್ಯಕ್ಷೆ ಸ್ಮಿತಾ ದಯಾನಂದ್, ಕಾರ್ಯದರ್ಶಿ ಜಯಲಕ್ಷ್ಮೀ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net