

ಕಡೂರು: ರಾಜ್ಯದಲ್ಲಿ ತಾಯಂದಿರ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಬಾಣಂತಿಯರ ಆರೈಕೆ ಹೆಚ್ಚಿಸುವ ಸಲುವಾಗಿ ರಾಜ್ಯದ ಪ್ರತಿ ತಾಲೂಕು ಆಸ್ಪತ್ರೆಗಳು 24*7 ತ್ರಿವಳಿ ತಜ್ಞ ವೈದ್ಯರ ಲಭ್ಯತೆ ಹಿನ್ನಲೆಯಲ್ಲಿ ಬೀರೂರು ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನು ಸಹ ತಾಲೂಕು ಆಸ್ಪತ್ರೆಗೆ ನಿಯೋಜಿಸುವಂತೆ ಆದೇಶ ನೀಡಿರುವುದನ್ನು ಕೈಬಿಡುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಮಾತನಾಡಿ, ತಿಂಗಳಿಗೆ ಸರಾಸರಿ 30 ಅಥವಾ ಅದಕ್ಕಿಂತ ಹೆಚ್ಚಿನ ಹೆರಿಗೆ ಹೊರೆ ಹೊಂದಿರುವ ಸಮುದಾಯ ಆರೋಗ್ಯ ಕೇಂದ್ರಗಳ ಅನಸ್ತೇಶಿಯಾ, ಮಕ್ಕಳ ತಜ್ಞರು, ಪ್ರಸೂತಿ ತಜ್ಞರನ್ನು ತಾಲೂಕು ಆಸ್ಪತ್ರೆಗಳಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಸೂಚಿಸಲಾಗುವುದು ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕಡೂರು ಮತ್ತು ಬೀರೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗಳು ಉತ್ತಮ ಸೇವೆ ನೀಡುವ ಮೂಲಕ ಹೆಸರು ಗಳಿಸಿದೆ. ಕಡೂರು ಆಸ್ಪತ್ರೆಗೆ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ತಜ್ಞ ವೈದ್ಯರ ನೇಮಕ ಮತ್ತು ಸಮುದಾಯ ಆರೋಗ್ಯ ಕೇಂದ್ರವಾಗಿರುವ ಬೀರೂರು ಆಸ್ಪತ್ರೆಯನ್ನು ಸಾರ್ವಜನಿಕ ಆಸ್ಪತ್ರೆಯಾಗಿಯೇ ಮುಂದುವರಿಸಬೇಕಿದೆ. ಯಗಟಿ ಸಮುದಾಯ ಆರೋಗ್ಯ ಕೇಂದ್ರವಾಗಿದ್ದರೂ ಇದುವರೆಗೂ ಅಗತ್ಯ ವೈದ್ಯರು ಮತ್ತು ಸಿಬ್ಬಂದಿ ನೇಮಕವಾಗಿಲ್ಲ. ಹಿರೇನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಿಕೊಡುವಂತೆ ಸದನದಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ಸಕಾರಾತ್ಮಕ ಸ್ಪಂದನೆಯಾಗಿದ್ದರೂ ಕಾರ್ಯ ವಿಳಂಬವಾಗಿದೆ. ತುರ್ತಾಗಿ ತಜ್ಞ ವೈದ್ಯರ ನೇಮಕವಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಮಕ್ಕಳ ಆಸ್ಪತ್ರೆಯ ಮಂಜೂರಾತಿಯ ಪ್ರಸ್ತಾವನೆ ಕುರಿತು ಪರಿಶೀಲಿಸಿದರು. ಆಸ್ಪತ್ರೆಯ ಹೊರರೋಗಿಗಳ ವಿಭಾಗ ಮತ್ತು ಶುಚಿತ್ವ ಸೇರಿದಂತೆ ಉಗ್ರಾಣದ ವಿಭಾಗಕ್ಕೆ ಭೇಟಿ ನೀಡಿದರು. ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಸೈಯಾದ್‌ಯಾಸೀನ್ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್. ಪ್ರವೀಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂಕಲ್ಲೇಶ್, ಬಾಸೂರು ಚಂದ್ರಮೌಳಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಸಾರ್ವಜನಿಕ ಆಸ್ಪತ್ರೆಯ ಮೇಲ್ವಿಚಾರಕಿ ಡಾ. ಚಂದಾ, ಡಾ. ಗುರುಮೂರ್ತಿ, ಡಾ. ಕಿರಣ್, ಡಾ. ಕೆ.ಎಂ. ದೀಪಕ್, ಡಾ. ಮೋಹನ್, ಚಂದ್ರೇಗೌಡ, ಯಗಟಿಗೋವಿಂದಪ್ಪ, ಕಂಸಾಗರ ರೇವಣ್ಣ, ಧರ್ಮರಾಜ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತಿತರಿದ್ದರು.