ತಾಂತ್ರಿಕ ಸಮಸ್ಯೆಯ ನೆಪ ಸಮಂಜಸವಲ್ಲ

bkt-27-1
Published on

ಬಾಗಲಕೋಟೆ: ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳು ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಕಾಲ, ಆರ್ ಟಿ ಐ, ಐಪಿಜಿಆರ್ ಎಸ್ (ವಾಟ್ಸಾಪ್ ಗ್ರುಪ್), ಗ್ರಾಮ ಒನ್ ಸೇವಾಸಿಂಧು ಪೋರ್ಟಲ್
ಹಾಗೂ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಕುಂದು-ಕೊರತೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಸ್ಪಂದಿಸುವ ಕಾರ್ಯವಾಗಬೇಕು. ಅರ್ಜಿ ಸಲ್ಲಿಸಲು ಆನ್ ಲೈನ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬರುವುದು ಸಹಜ. ಬಂದಂತಹ ಅರ್ಜಿಗಳನ್ನು ಶಿಸ್ತುಬದ್ಧವಾಗಿ ವಿಂಗಡಿಸಿ, ಸಮಂಜಸವಾದ ಹಿಂಬರಹ ಅಥವಾ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರ ನೀಡುವ ಮೂಲಕ ಅರ್ಜಿದಾರರ ಸಂಖ್ಯೆಯನ್ನು ಕಡಿತಗೊಳಿಸಬೇಕು ಎಂದರು.
ಅರ್ಜಿ ವಿಲೇವಾರಿಗೆ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಪ್ರತಿಬಾರಿ ಸಾಫ್ಟ್ ವೇರ್ ಸಮಸ್ಯೆ ಎಂದು ಹೇಳುವುದು ಸಮಂಜಸವಲ್ಲ. ಸಕಾಲ, ಗ್ರಾಮ ಒನ್ ಸೇವಾಸಿಂಧು ಪೋರ್ಟಲ್ ನಿರ್ವಹಿಸುವಂತಹ ಕನ್ಸಲ್ ಟೆಂಟ್ ಎಲ್ಲ ಇಲಾಖೆಗಳ ವೆಬ್ ಸೈಟ್ ತಂತ್ರಾಂಶಗಳ ಕುರಿತ ಸರಿಯಾದ ಮಾಹಿತಿ ಹೊಂದಿದ್ದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಕಂಡುಕೊಳ್ಳಬಹುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎಸಿ ಶ್ವೇತಾ ಬೀಡಿಕರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೈತ್ರಾ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net