

ಸೊರಬ: ಕೊಡಕಣಿ ಗ್ರಾಮದ ತವರೆಕೆರೆಯಲ್ಲಿ ಮಂಗಳವಾರ ಮೀನು ಬೇಟೆ ಸಡಗರ. ಮೀನು ಪ್ರಿಯರು ಕೆರೆ ಬೇಟೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕೊಡಕಣಿ, ಹೆಸರೆ, ಹರಳಿಗೆ ಗ್ರಾಮ ಸೇರಿ ಹಲವೆಡೆ ಕೆರೆಬೇಟೆ ನಡೆಯಿತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದುದರಿಂದ ಹೆಚ್ಚಿನ ಜನ ಭಾಗವಹಿಸಿದ್ದರು.
ಮುಂಗಾರು ಮಳೆಗೆ ಕೆರೆಗಳು ತುಂಬಿದಾಗ ಗ್ರಾಮಸ್ಥರು ವಿವಿಧ ಜಾತಿಯ ಮೀನಿನ ಮರಿಗಳನ್ನು ಬಿಡುತ್ತಾರೆ. ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಗ್ರಾಮದಲ್ಲಿ ಕೆರೆಬೇಟೆ ಸಾರುತ್ತಾರೆ. ಇದೆಲ್ಲದರ ನಡುವೆ ಒಂದು ಹಬ್ಬವಾಗಿ ಕೆರೆಬೇಟೆಯನ್ನು ಸಂಭ್ರಮಿಸುತ್ತಾರೆ.
ಕೊಡಕಣಿ ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿ ಹಾಗೂ ಜರಡಿ ಬಲೆಗೆ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮದವರು ಒಂದು ಕೂಣಿ ಹಾಗೂ ಜರಡಿ ಬಲೆಗೆ 600 ರೂ. ಕೊಟ್ಟು ಕೆರೆಬೇಟೆಯಲ್ಲಿ ಪಾಲ್ಗೊಂಡಿದ್ದರು.