ತಳವರ್ಗಗಳ ಅಭಿವೃದ್ಧಿಗೆ ಮೀಸಲು ಕಾರಣ

Channagiri, KH Muniappa, Reservation,
Published on

ಚನ್ನಗಿರಿ: ಸಮಾಜದ ತುಳಿತಕ್ಕೊಳಗಾದ ತಳವರ್ಗದ ಸಮುದಾಯಗಳು ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸಾಂವಿಧಾನಿಕ ಮೀಸಲಾತಿಯೇ ಕಾರಣವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ತಾಲೂಕು ಹಿರೇಗಂಗೂರು ಗ್ರಾಮದಲ್ಲಿ ಮಂಗಳವಾರ ತಾಲೂಕು ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಹಾಗೂ 132ನೇ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭಲ್ಲಿ ಮಾತನಾಡಿದರು.

ಬಿಜೆಪಿ ಸರ್ಕಾರ ಸಂವಿಧಾನ ಬದಲಾವಣೆ ಮಾಡಲು ಹೊರಟಾಗ ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ನಡೆಸುವ ಮೂಲಕ ಶೋಷಿತ ವರ್ಗ ಮುಂಚೂಣಿಗೆ ತರಲು ಪಣತೊಟ್ಟಿದ್ದೆವು ಎಂದರು.

ಗ್ರಾಮ, ಪಟ್ಟಣಗಳಲ್ಲಿ ಸಣ್ಣ ಪುಟ್ಟ ವ್ಯಾಜ್ಯಗಳಿಗೆ ಜಾತಿ ನಿಂದನೆ ಪ್ರಕರಣ ದಾಖಲಿಸುವುದನ್ನು ಬಿಡಬೇಕು. ಹೋರಾಟಗಳು ಕಾನೂನಾತ್ಮಕವಾಗಿ ಇರಬೇಕು. ಎಲ್ಲ ಸಮುದಾಯಗಳ ಸಹಕಾರ, ಭ್ರಾತೃತ್ವ, ಪ್ರೀತಿ ಗಳಿಸುವ ಮೂಲಕ ಹಿಂದುಳಿದವರು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ಹಿಂದುಳಿದ ಸಮುದಾಯಗಳು ಶಿಕ್ಷಣ ಪಡೆದರೆ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಆರ್ಥಿಕ ಹಿಂದುಳಿದವರು, ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಸಮಾಜದ ಎಲ್ಲ ಅರ್ಹ ಸಮುದಾಯದವರಿಗೂ ಮೀಸಲಾತಿ ಸಿಕ್ಕಿದೆ. ಆದ್ದರಿಂದ ತಳ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದರು.

ಶಾಸಕ ಬಸವರಾಜ್ ಶಿವಗಂಗಾ ಮಾತನಾಡಿ, ದೇವಸ್ಥಾನಗಳ ಮುಂದೆ ಸಾಲು ನಿಲ್ಲುವ ಬದಲು ಗ್ರಂಥಾಲಯಗಳ ಸಾಲು ನಿಲ್ಲುವ ಕಾಲಬಂದರೆ ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ ಎಂದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಿದಾಗ ಮಾತ್ರ ಸಮಾಜದಲ್ಲಿ ಸ್ಥಾನಮಾನ ಪಡೆಯಲು ಸಾಧ್ಯ. ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಗ್ರಂಥಾಲಯಗಳನ್ನು ತೆರೆಯಬೇಕು ಎಂದರು.

ಸಾಸ್ವೇಹಳ್ಳಿ ಏತನೀರಾವರಿ ಯೋಜನೆಗಾಗಿ ಮನವಿ ಸಲ್ಲಿಸಲಾಯಿತು. ಡಿಎಸ್‌ಎಸ್ ರಾಜ್ಯ ಸಂಚಾಲಕ ಗುರುಮೂರ್ತಿ, ಕೆಪಿಸಿಸಿ ವಕ್ತಾರ ಹೊದಿಗೆರೆ ರಮೇಶ್, ಕಾಂಗ್ರೆಸ್ ಮುಖಂಡ ವೀರೇಶ್‌ನಾಯ್ಕ, ಕುಂದುವಾಡ ಮಂಜುನಾಥ್, ಹನಗವಾಡಿ ರುದ್ರಪ್ಪ, ಸಿ.ಎಚ್.ನಾಗರಾಜ್, ಕಗತೂರು ಮಲ್ಲೇಶಪ್ಪ, ಡಿಎಸ್‌ಎಸ್ ಸಂಚಾಲಕ ಚಿತ್ರಲಿಂಗಪ್ಪ, ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net