ತಳಮಟ್ಟದಿಂದ ಪಕ್ಷ ಕಟ್ಟಿದವರು ಯಡಿಯೂರಪ್ಪ

CHAMARAJA-BJP-L.NAGENDRA- MLA
Published on

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸೆಡ್ಡು ಹೊಡೆದು ಪದೇ ಪದೆ ಕೆಂಡಕಾರುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಶಾಸಕ, ಬಿಜೆಪಿ ಮೈಸೂರು ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ ಕಿಡಿಕಾರಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಹಾದಿ ಬೀದಿಲಿ ನಿಂತು ಯಾರೂ ಮಾತನಾಡಬಾರದು. ತಳಮಟ್ಟದಿಂದ ಪಕ್ಷ ಕಟ್ಟಿದವರು ಯಡಿಯೂರಪ್ಪ. ಎರಡು ಸ್ಥಾನ ಇದ್ದ ಪಕ್ಷವನ್ನು ಈ ಮಟ್ಟಕ್ಕೆ ತರುವಲ್ಲಿ ಅವರ ಪಾತ್ರ ಅಪಾರವಾಗಿದೆ. ಅವರ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೆ ನಾವು ಸಹಿಸಲ್ಲ ಎಂದು ಎಚ್ಚರಿಸಿದರು.

ಯತ್ನಾಳ್ ಒಬ್ಬ ಎಂಎಲ್‌ಎ ಅಷ್ಟೇ. ನಾನೂ ಎಂಎಲ್‌ಎ ಆಗಿದ್ದೆ. ಬಾಯಿಗೆ ಬಂದ ಹಾಗೆ ಸುಖಾಸುಮ್ಮನೆ ಮಾತನಾಡುತ್ತಿದ್ದರೆ ಕಾರ್ಯಕರ್ತರು ಸಹಿಸಲ್ಲ. ಪಕ್ಷದ ಮಾನಮರ್ಯಾದೆಯನ್ನು ಬೀದಿಯಲ್ಲಿ ಕಳೆಯೋಕೆ ಹೋಗಬೇಡಿ. ಬೇಕಿದ್ದರೆ ಹೈಕಮಾಂಡ್ ಜತೆ ಕುಳಿತು ಮಾತನಾಡಿ ಎಂದು ಸಲಹೆ ನೀಡಿದರು.

ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವರು ರಾಷ್ಟ್ರೀಯ ನಾಯಕರು. ಆದರೆ ಹಾದಿ-ಬೀದಿಯಲ್ಲಿ ಮಾತನಾಡಿ ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಳ್ಳುತ್ತಿದ್ದಾರೆ. ಇವರ ನಡೆಯಿಂದ ಕಾರ್ಯಕರ್ತರಿಗೆ ಭಾರಿ ನೋವುಂಟಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ. ಹಾಗಾಗಿ, ನಾಳೆ ಚುನಾವಣೆ ಬಂದರೂ ಬಿಜೆಪಿ ಗೆಲ್ಲುವ ವಾತಾವರಣ ಇದೆ. ಇಂತಹ ಸಂದರ್ಭದಲ್ಲಿ ಹಾದಿ ಬೀದಿಯಲ್ಲಿ ಗಲಾಟೆ ಮಾಡಿಕೊಂಡು ಕಾರ್ಯಕರ್ತರ ತಲೆ ತಗ್ಗಿಸುವ ಹಾಗೆ ಮಾಡಬೇಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net