ತಲಕಾಡಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಅಲಭ್ಯ

IMG_20230521_180837
Published on

ತಲಕಾಡು: ಕೊಳ್ಳೇಗಾಲ, ಮಳವಳ್ಳಿ, ತಿ.ನರಸೀಪುರ ತಾಲೂಕು ಕೇಂದ್ರಗಳಿಂದ ಸಮರ್ಪಕವಾಗಿ ಸರ್ಕಾರಿ ಬಸ್ ಸೇವೆ ಇಲ್ಲದೆ ಈ ಭಾಗದ ಜನರಿಗೆ ಅನನುಕೂಲವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.


ಮಳವಳ್ಳಿ ಬಸ್ ನಿಲ್ದಾಣದಿಂದ ಬೆಳಗ್ಗೆಯಿಂದ ಸಂಜೆವರೆಗೂ ಒಂದುವರೆ ಗಂಟೆಗೊಮ್ಮೆ ತಲಕಾಡಿಗೆ ಬಸ್ ಸೇವೆ ನೀಡುತ್ತಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಿದ್ದರೂ ಒಂದೆರಡು ಬಸ್‌ಗಳು ಮಾತ್ರ ತಲಕಾಡಿಗೆ ಬರುತ್ತಿವೆ. ಹೀಗಾಗಿ ಬಸ್ ಸೇವೆ ನಾಮ್‌ಕೇವಾಸ್ತೆ ಆಗಿದೆ.


ಅಲ್ಲದೆ ಕೊಳ್ಳೇಗಾಲ-ತಲಕಾಡು ಮಾರ್ಗವಾಗಿ ಬೆಂಗಳೂರಿಗೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಬಸ್ ವ್ಯವಸ್ಥೆ ಕಲ್ಪಿಸಿದ್ದು, ತಲಕಾಡು ಭಾಗದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಿತ್ತು. ಈಗ ಅದೂ ನಿಂತು ಹೋಗಿದ್ದು ಪ್ರಯಾಣಿಕರು ಬೆಂಗಳೂರಿಗೆ ತಲಕಾಡಿನಿಂದ ನೇರವಾಗಿ ತೆರಳಲು ಸಾಧ್ಯವಾಗದೆ ಮಳವಳ್ಳಿಗೆ ತೆರಳಿ ಬೆಂಗಳೂರಿನ ಬಸ್ ಹತ್ತುತ್ತಿದ್ದಾರೆ.


ಬೆಂಗಳೂರು-ತಲಕಾಡಿಗೆ ಹೋಗಲು ಹಾಗೂ ಬರಲು ನೇರ ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಮೈಸೂರು-ತಿ.ನರಸೀಪುರ- ತಲಕಾಡು ಮಾರ್ಗವಾಗಿ ಕೊಳ್ಳೇಗಾಲ ಅಥವಾ ಮಳವಳ್ಳಿಗೆ ತೆರಳುವ ಪ್ರಯಾಣಿಕರಿಗೆ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲ.
ಮಳವಳ್ಳಿ-ಕೊಳ್ಳೇಗಾಲ-ತಿ.ನರಸೀಪುರ-ನಂಜನಗೂಡಿನಿಂದ ತಲಕಾಡು ಮಾರ್ಗವಾಗಿ ನಿಯೋಜಿಸಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲಿಗೆ ಬರುತ್ತಿವೆಯೇ ಇಲ್ಲವೇ ಎಂದು ಪರಿಶೀಲನೆ ನಡೆಸಲು ಕೆಎಸ್‌ಆರ್‌ಟಿಸಿಯಿಂದ ತಲಕಾಡಿನಲ್ಲಿ ಅಧಿಕಾರಿಯನ್ನೂ ನಿಯೋಜಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗಾಗಿ ತಲಕಾಡಿಗೆ ಸಮರ್ಪಕವಾಗಿ ಬಸ್ ಸೇವೆ ಒದಗಿಸುವಂತೆ ಸ್ಥಳೀಯರು ಹಾಗೂ ಪ್ರವಾಸಿಗರು ಆಗ್ರಹಿಸಿದ್ದಾರೆ.

ಮಳವಳ್ಳಿ ಡಿಪೋ ಬಸ್ ಮಾರ್ಗ ಅಧಿಕಾರಿ ಸಂಪತ್ ಪ್ರತಿಕ್ರಿಯಿಸಿ, ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೂ ಮಳವಳ್ಳಿ ಬಸ್ ನಿಲ್ದಾಣದಿಂದ ಪ್ರತಿ ಒಂದುವರೆ ಗಂಟೆಗೊಮ್ಮೆ ಬಸ್‌ಗಳನ್ನು ನಿಯೋಜಿಸಲಾಗಿದ್ದು, ನಿಗದಿತ ಸಮಯಕ್ಕೆ ಸಂಚಾರ ಆರಂಭಿಸುತ್ತಿವೆ. ಮಲೆ ಮಹದೇಶ್ವರ ಬೆಟ್ಟದ ಅಮಾವಾಸ್ಯೆ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ಬೆಟ್ಟದ ಟ್ರಿಪ್‌ಗಳಿಗೆ ನಿಯೋಜಿಸಲಾಗಿತ್ತು. ಹೀಗಾಗಿ ತಲಕಾಡಿಗೆ ಮಳವಳ್ಳಿ ಡಿಪೋದಿಂದ ಎಂದಿನಂತೆ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net