ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲಾದ್ಯಂತ ಇತ್ತೀಚೆಗೆ ಬೀಳುತ್ತಿದ್ದ ಮಳೆಯಿಂದಾಗಿ ತರಕಾರಿ ಬೆಳೆಗಳಿಗೆ ತೇವಾಂಶ ಹೆಚ್ಚಾಗಿದ್ದು ಫಸಲು ಇಳಿಮುಖಗೊಂಡಿದ್ದು, ತರಕಾರಿಗಳು ಗುಣಮಟ್ಟ ಕಳೆದುಕೊಂಡಿದ್ದರೂ ಬೆಲೆ ಗಗನಕ್ಕೆ ಏರಿದ್ದು, ರೈತರಿಗೂ ನಷ್ಟ, ಗ್ರಾಹಕರಿಗೂ ಕಷ್ಟ ಎನ್ನುವಂತೆ ಆಗಿದೆ.
ಕಳೆದ ಒಂದು ವಾರದಿಂದ ಮಳೆ ಬೀಳುತ್ತಿದ್ದ ಕಾರಣ ಹಾಗೂ ಜಡಿಮಳೆ ಇದ್ದುದ್ದರಿಂದ ತೇವಾಂಶ ಹೆಚ್ಚಾಗಿ ತರಕಾರಿ ಬೆಳೆಗಳ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ತರಕಾರಿಗಳು ಗುಣಮಟ್ಟವೂ ಕಳೆದುಕೊಂಡವು. ಫಸಲು ಕಡಿಮೆಯಾದ ಕಾರಣ ಗುಣಮಟ್ಟವಿಲ್ಲದ ತರಕಾರಿಯ ಬೆಲೆಯು ಹೆಚ್ಚಾಗತೊಡಗಿದೆ.
ತೇವಾಂಶ ಹೆಚ್ಚಾಗಿರುವ ಕಾರಣ ಬೆಳೆಗಳಿಗೆ ವೈರೆಸ್ ಜೊತೆಗೆ ಬಿಂಗಿ, ಊಜಿ ಹಾವಳಿ ಹಾಗೂ ಕಪ್ಪುಚುಕ್ಕೆ ರೋಗ ಕಾಣಿಸಿಕೊಂಡು ತರಕಾರಿಗಳು ಗುಣಮಟ್ಟ ಕಳೆದುಕೊಂಡಿವೆ. ಅಗತ್ಯಕ್ಕಿಂತ ಹೆಚ್ಚಾಗಿ ತರಕಾರಿಯನ್ನು ಪೂರೈಸಲು ಸಾಧ್ಯವಿಲ್ಲದ ಕಾರಣ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೆ ಏರಿದೆ. ಚಿಲ್ಲರೆ ವ್ಯಾಪಾರಸ್ಥರು ಮಾರುಕಟ್ಟೆಗಿಂತ ಎರಡು ಪಟ್ಟು ದುಪ್ಪಟ್ಟು ದರದಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿರುವುದರಿಂದ ಖರೀದಿಸುವ ಗ್ರಾಹಕರಿಗೆ ಕಷ್ಟ ಎನ್ನುವಂತೆ ಆಗಿದೆ.
ಜಿಲ್ಲೆಯಲ್ಲಿ ಟಮೆಟೋವನ್ನು ಹೆಚ್ಚಾಗಿ ರೈತರು ಬೆಳೆಯುತ್ತಿದ್ದು, ತೇವಾಂಶ ಹೆಚ್ಚಾಗಿರುವ ಕಾರಣ ವೈರಸ್ ಮತ್ತು ಬಿಂಗಿರೋಗ ರೈತರನ್ನು ಕಾಡುತ್ತಿದೆ. ಜೊತೆಗೆ ಹೊಸ ಹೊಸ ತಳಿಗಳನ್ನು ಬೀಜ ಕಂಪನಿಗಳವರು ರೈತರಿಗೆ ನೀಡುತ್ತಿದ್ದು, ಅವು ರೋಗಗ್ರಸ್ತ ತಳಿಗಳಾಗಿದ್ದು, ವೈರಸ್ ಕಾಟದಿಂದ ಟೊಮೆಟೋ ಫಸಲಿಗೆ ಧಕ್ಕೆ ಉಂಟಾಗಿ ಗುಣಮಟ್ಟವನ್ನು ಕಳೆದುಕೊಂಡು ಮಾರುಕಟ್ಟೆಯಲ್ಲಿ ಬೆಲೆ ಕುಸಿಯಲು ಕಾರಣವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಭಾನುವಾರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ :
ಬೀನ್ಸ್ ೩೫ ರಿಂದ ೪೦, ಕ್ಯಾರಟ್ ೫೦ ರಿಂದ ೬೦, ಬದನೆಕಾಯಿ ೩೦ ರಿಂದ ೪೦, ಹಸಿಮೆಣಸಿನಕಾಯಿ ೪೦ ರಿಂದ ೫೦, ಹಾಗಲಕಾಯಿ ೩೦ ರಿಂದ ೪೦, ಬಜ್ಜಿ ಮೆಣಸಿನಕಾಯಿ ೩೦ ರಿಂದ ೪೦, ಕ್ಯಾಪ್ಸಿಕಂ ೪೦ ರಿಂದ ೫೦, ನವಿಲುಕೋಸು ೪೦ ರಿಂದ ೫೦, ಸೊರೆಕಾಯಿ ೪೦, ಹೀರೇಕಾಯಿ ೪೦ ಇವು ಕೆ.ಜಿ.ದರದಲ್ಲಿ ಮಾರಾಟವಾಗಿರುವುದು.
ಇದು ಮಾರುಕಟ್ಟೆ ದರವಾದರೆ ಚಿಲ್ಲರೆ ವ್ಯಾಪಾರಸ್ಥರು ಮಾರುಕಟ್ಟೆಗಿಂತ ೨ ಪಟ್ಟು ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಅತಿಯಾದ ಮಳೆ ಮತ್ತು ತೇವಾಂಶ ಹೆಚ್ಚಾಗಿರುವ ಕಾರಣ ಫಸಲು ಕಡಿಮೆ ಆದ ಕಾರಣ ಬೆಲೆ ಏರಿಕೆಯು ಹೆಚ್ಚಾಗಿದೆ.
ಕೋಟ್
ತರಕಾರಿಗಳು ಮಾರುಕಟ್ಟೆಗೆ ಅಗತ್ಯಕ್ಕಿಂತ ಕಡಿಮೆ ಪೂರೈಕೆ ಆಗುತ್ತಿದೆ. ತರಕಾರಿ ಗುಣಮಟ್ಟ ಇಲ್ಲದಿದ್ದರು ಕಡಿಮೆ ಪೂರೈಕೆಯಿಂದ ಬೆಲೆ ಹೆಚ್ಚಳವಾಗಿದೆ. ಎಲ್ಲಾ ತರಕಾರಿಗಳು ೫೦ ರೂ.ಗಳಿಗಿಂತ ಕಡಿಮೆ ಇಲ್ಲದೆ ಮಾರಾಟವಾಗುತ್ತಿದೆ. ೨ ದಿನಗಳಿಂದ ಮಳೆ ಇಲ್ಲ. ಮಳೆ ಹಿಂದಕ್ಕೆ ಹೋದರೆ ಗುಣಮಟ್ಟದ ತರಕಾರಿಗಳು ಮಾರುಕಟ್ಟಗೆ ಬರುತ್ತವೆ.
-ಪುಟ್ಟರಾಜು, ಮಂಡಿ ಮಾಲೀಕ, ಎಪಿಎಂಸಿ ಕೋಲಾರ.
ಚಿತ್ರ ೦೯ ಕೆ.ಎಲ್.ಆರ್. ೦೩ : ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿಗಳು ಮಾರಾಟ ಮಾಡುತ್ತಿರುವ ಚಿತ್ರ
ಚಿತ್ರ ೦೯ ಕೆ.ಎಲ್.ಆರ್. ೦೩ಎ : ಪುಟ್ಟರಾಜು, ಮಂಡಿ ಮಾಲೀಕ, ಎಪಿಎಂಸಿ ಕೋಲಾರ ರವರ ಭಾವಚಿತ್ರ