ತಮಿಳುನಾಡು ವಿರುದ್ಧ ಸಮರ: ಜಲವಿದ್ಯುತ್, ನದಿ ಜೋಡಣೆಗೆ ವಿರೋಧ; ಬೊಮ್ಮಾಯಿ ಮಾಹಿತಿ

CM Meeting
ನವದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಾರಾಜ್ಯ ಜಲ ವಿವಾದ ಕುರಿತು ಮಂಗಳವಾರ ಸಭೆ ನಡೆಸಿದರು. ಸಚಿವರಾದ ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿರಿಯ ಕಾನೂನು ತಜ್ಞರು ಉಪಸ್ಥಿತರಿದ್ದರು.
Published on

ನವದೆಹಲಿ: ತಮಿಳುನಾಡು ಸರ್ಕಾರ ಕೈಗೊಂಡಿರುವ ಹೊಗೇನಕಲ್ ಜಲವಿದ್ಯುತ್ ಯೋಜನೆ ಮತ್ತು ಕಾವೇರಿ-ಗುಂಡಾರ್-ವೈಗೈ ನದಿಜೋಡಣೆ ಯೋಜನೆಗಳನ್ನು ನ್ಯಾಯಾಲಯದ ಮೂಲಕ ವಿರೋಧಿಸಲು ತೀರ್ವನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕರ್ನಾಟಕ ಭವನದಲ್ಲಿ ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಸಚಿವರು ಮತ್ತು ಕಾನೂನು ತಜ್ಞರೊಂದಿಗೆ ಮಂಗಳವಾರ ನಡೆದ ಸಭೆ ಬಳಿಕ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು. ನೆಲ ಜಲದ ವಿಚಾರದಲ್ಲಿ ರಾಜ್ಯ ಎಂದಿಗೂ ಒಂದಾಗಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎನ್.ಜಿ.ಟಿ ಹಾಗೂ ಮತ್ತೊಂದು ಪ್ರಕರಣ ಒಟ್ಟಿಗೆ ವಿಚಾರಣೆಗೆ ಬರಲಿದ್ದು, ನಮ್ಮ ಆಕ್ಷೇಪಗಳನ್ನು ಸಲ್ಲಿಸಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಿದ್ದೇವೆ ಎಂದರು.

ನ್ಯಾಯಮೂರ್ತಿಗಳ ನೇಮಕ: ಕೃಷ್ಣಾ ಎರಡನೇ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ನಲ್ಲಿ ಕಳೆದ ಬಾರಿ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದು, ಮುಂದಿನ ವಿಚಾರಣೆಯೊಳಗೆ ಹೊಸ ನ್ಯಾಯಮೂರ್ತಿಗಳ ನೇಮಕ ಕೋರಿ ರಿಜಿಸ್ಟ್ರಾರ್ ಜನರಲ್​ಗೆ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ಕ್ರಮಕೈಗೊಳ್ಳಲಿದ್ದಾರೆ. ತಪ್ಪಿದಲ್ಲಿ ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಬೇಕೆಂದು ನಿರ್ಧರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಮೇಕೆದಾಟು ಯೋಜನೆ ಡಿಪಿಆರ್ ಕುರಿತು ಕೇಂದ್ರ ಜಲ ಆಯೋಗದ ಹಾಗೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆಯೂ ನಮ್ಮ ನಿಲುವನ್ನು ಸ್ಪಷ್ಟಪಡಿಸಲು ತೀರ್ವನಿಸಿದ್ದು, ಪರಿಸರ ಅನುಮತಿ ದೊರೆಯಬೇಕಿದೆ ಎಂದರು.

ಮಹದಾಯಿ: ಮಹದಾಯಿ ನದಿ ಬಗ್ಗೆಯೂ ಚರ್ಚೆಯಾಗಿದೆ. ಶೀಘ್ರ ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ಕೋರಲಾಗಿದೆ. ಅದೂ ಅಂತಿಮ ಘಟ್ಟದಲ್ಲಿದೆ. ನ್ಯಾಯಾಲಯದ ಪ್ರಕರಣಗಳು ಯಾವ ಹಂತದಲ್ಲಿವೆ. ಈಗಾಗಲೆ ಪ್ರಾರಂಭಿಸಿರುವ ಯೋಜನೆಗಳನ್ನು ಹೇಗೆ ಮುಂದುವರಿಸಬೇಕೆಂಬ ಬಗ್ಗೆ ರ್ಚಚಿಸಿ, ಒಟ್ಟಾರೆ ಸಲಹೆಗಳನ್ನು ಸ್ವೀಕರಿಸಲಾಗಿದೆ. ಗೋದಾವರಿ, ಕೃಷ್ಣಾ, ಕಾವೇರಿ, ಪೆನ್ನಾರ್ ನದಿ ಜೋಡಣೆಗೆ ಸಂಬಂಧಿಸಿದಂತೆ ಚರ್ಚೆಯಾಗಿದ್ದು, ಆಕ್ಷೇಪಗಳನ್ನು ದಾಖಲಿಸಬೇಕಿದೆ. ಇತರ ರಾಜ್ಯಗಳ ಜತೆಗೆ ನಮ್ಮ ಪಾಲು ನಿರ್ಧರಿಸುವವರೆಗೂ ವಿಸõತ ಯೋಜನಾ ವರದಿ ಒಪ್ಪಿಗೆ ನೀಡದಂತೆ ಹೊಸದಾಗಿ ಆಕ್ಷೇಪ ಸಲ್ಲಿಸುವ ಚಿಂತನೆಯಿದೆ. ನದಿ ಜೋಡಣೆಯ ಡಿಪಿಆರ್​ಗೆ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಪ್ಪಿಗೆ ಪಡೆಯುವ ಅವಶ್ಯಕತೆಯನ್ನು ಹಣಕಾಸು ಸಚಿವರಿಗೆ ಮನದಟ್ಟು ಮಾಡಿಕೊಡಲಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ಮನವಿ: ಸಂಗೊಳ್ಳಿಯಲ್ಲಿ 189 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸುತ್ತಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಮುಕ್ತಾಯದ ಹಂತದಲ್ಲಿದ್ದು, ಈ ಶಾಲೆಯನ್ನು ಸೈನಿಕ ಸ್ಕೂಲ್ ಸೊಸೈಟಿಗೆ ಹಸ್ತಾಂತರಿಸಲು ಅನುವು ಮಾಡಿಕೊಡಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ. ಸಿಂಗ್ ಅವರನ್ನು ಭೇಟಿಯಾದ ವೇಳೆ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ರ್ಚಚಿಸಿ, ಸೈನಿಕ್ ಸ್ಕೂಲ್ ಸೊಸೈಟಿಯ ಅಧಿಕಾರಿಗಳು ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಈಗಾಗಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಸೈನಿಕ ಶಾಲೆ ಮಾನದಂಡಗಳ ಪಾಲನೆಗೆ ಕ್ರಮವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೈನಿಕ್ ಸ್ಕೂಲ್ ಸೊಸೈಟಿ ಅಧೀನಕ್ಕೆ ಒಳಪಡಿಸಲು ಅನುಮೋದನೆ ನೀಡಬೇಕು ಎಂದು ಬೊಮ್ಮಾಯಿ ಕೋರಿದರು.

ಇಂದು ಸಂಪುಟ ಸಭೆ

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಫೆ.14ರಂದು ಮಾಡುವ ಭಾಷಣಕ್ಕೆ ಬುಧವಾರ (ಫೆ.9) ನಡೆಯುವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದೆ. ಸಂಪ್ರದಾಯದಂತೆ ವರ್ಷದ ಪ್ರಥಮ ಅಧಿವೇಶನದ ಮೊದಲ ದಿನ ರಾಜ್ಯಪಾಲರು ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡುವರು. ಬಳಿಕ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಉಳಿದಂತೆ ಈ ಅಧಿವೇಶನದಲ್ಲಿ ಮಂಡನೆಯಾಗುವ ವಿಧೇಯಕಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ.

ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ

ನವದೆಹಲಿ: ಕಾವೇರಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದರು. ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಘೋಷಿಸಿರುವ ನದಿ ಜೋಡಣೆ ವಿಷಯ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಕರ್ನಾಟಕಕ್ಕೆ ಹಿಂದಿನಿಂದಲೂ ನೀರಿನ ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗುತ್ತ ಬಂದಿದೆ ಎಂಬುದನ್ನು ಅಂಕಿ-ಸಂಖ್ಯೆಗಳ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟರು. ನದಿ ನೀರಿನ ಹಂಚಿಕೆಯಲ್ಲಿ ಪದೇ ಪದೆ ಅನ್ಯಾಯವಾದರೆ ರಾಜ್ಯದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗಲಿದೆ. ಬೆಂಗಳೂರಿನ ಇಂದಿನ ಜನಸಂಖ್ಯೆಗೆ 4.75 ಟಿಎಂಸಿ ನೀರು ಎಲ್ಲಿ ಸಾಲುತ್ತದೆ. ಈಗ ನಾವು ನೀರಾವರಿಗೆ ಹಂಚಿಕೆ ಮಾಡಿದ್ದರಲ್ಲೇ 50 ಟಿಎಂಸಿ ನೀರನ್ನು ಕುಡಿಯಲು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಇದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ ಎಂದರು.

ನಾನೊಬ್ಬನೇ ಹೋರಾಡಬೇಕು: ಕಾವೇರಿ ವಿಷಯ ಬಂದರೆ ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡುತ್ತವೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಒಂದು ಕಡೆ, ಬಿಜೆಪಿ ಇನ್ನೊಂದು ಕಡೆಗಿವೆ. ಹಾಗಾಗಿ ಕಾವೇರಿಗೋಸ್ಕರ ನಾನೊಬ್ಬನೇ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net