

ನುಗ್ಗೇಹಳ್ಳಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಸರ್ಕಾರಿ ಕಾಲೇಜು ಮುಂಭಾಗದಿಂದ ಹಿರಿಸಾವೆ ರಸ್ತೆಯವರೆಗೆ ಅಂಗಡಿ ಬಾಗಿಲುಗಳನ್ನು ಮುಚ್ಚಿಸಿ ಕರ್ನಾಟಕ ಸರ್ಕಾರ ತಮಿಳುನಾಡು ಸರ್ಕಾರ ಕಾವೇರಿ ನೀರು ನಿರ್ವಹಣ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಬಿ. ಆರ್. ದೊರೆಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಮಳೆಯಾಗದೆ ಬರ ಪರಿಸ್ಥಿತಿ ಇರುವಾಗ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವುದರಿಂದ ಜಲಾಶಯಗಳು ಬರಿದಾಗಿ ಇಲ್ಲಿಯ ಜನಜಾನುವಾರುಗಳಿಗೆ ಮುಂದೆ ಕುಡಿಯುವ ನೀರಿನ ಹಾಹಾಕಾರ ಉಂಟಾಗುತ್ತದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜ್ಯದ ರೈತರ ಪರವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಸಮುದ್ರಹಳ್ಳಿ ರಾಮಚಂದ್ರು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಂ. ನಟರಾಜ್, ಮುಖಂಡರಾದ ತೋಟಿ ನಾಗರಾಜ್, ಎನ್. ಎಸ್. ಲಕ್ಷ್ಮಣ್, ಎನ್. ಎಸ್. ಪ್ರಕಾಶ್, ಎಚ್. ಎಂ. ಗೋಪಾಲ್, ಸೋಮಶೇಖರಯ್ಯ, ಜಯಲಿಂಗೇಗೌಡ, ಕೃಪಾಶಂಕರ್, ಎಚ್. ಪಿ. ಸಂಪತ್ ಕುಮಾರ್, ಗಿರೀಶ್, ಜಾವೇದ್, ಎಚ್. ಎಂ. ರಮೇಶ್, ಗ್ರಾಮ ಪಂಚಾಯತಿ ಸದಸ್ಯರಾದ ಎನ್. ಆರ್. ನಟರಾಜ್, ಹೊನ್ನೇಗೌಡ, ಶಿವಕುಮಾರ್, ಮಂಜುನಾಥ್, ಹುಲ್ಲೇನಹಳ್ಳಿ ರಾಮಕೃಷ್ಣ, ಸಣ್ಣ ಶಿವಣ್ಣ, ಚಂದ್ರಣ್ಣ, ರಾಜಣ್ಣ, ಶಶಿ ಅಮ್ಮ, ಇತರರಿದ್ದರು.