ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಡಿ

19tnpnewsfile01 (3)
Published on

ತಿ.ನರಸೀಪುರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ನಿಲ್ಲಿಸಿ ಭತ್ತದ ಬೆಳೆಗೆ ನೀರು ಪೂರೈಸಬೇಕು ಎಂದು ಆಗ್ರಹಿಸಿ ಬಿಂದಿಗೆ ಫ್ಯಾಕ್ಟರಿ ಸಮೀಪ ರೈತರು ಶನಿವಾರ ಸಂಚಾರ ತಡೆ ನಡೆಸಿದರು.


ರೈತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕುರುಬೂರ್ ಸಿದ್ದೇಶ್, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಂದು ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದ ಸರ್ಕಾರ ಈಗ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದು ದ್ರೋಹವೆಸಗಿದಂತಾಗಿದೆ ಎಂದರು.


ನಮ್ಮ ರಾಜ್ಯದ ರೈತರ ಹಿತ ಕಾಪಾಡದೇ ಪಕ್ಕದ ರಾಜ್ಯದ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ಇದು ಅವಿವೇಕಿಗಳ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.


ನಮ್ಮ ರೈತರಿಗೆ ಸೂಕ್ತವಾಗಿ ಕಾವೇರಿ ನೀರು ಒದಗಿಸದಿದ್ದರೆ ನದಿ ಪಾತ್ರದಲ್ಲಿರುವ ರೈತರು ನದಿಗೆ ಇಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಒಂದು ಗಂಟೆಗೂ ಹೆಚ್ಚು ಕಾಲ ಮೈಸೂರು-ತಿ.ನರಸೀಪುರ ಹೆದ್ದಾರಿ ಸಂಚಾರ ತಡೆ ಮಾಡಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.


ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಮುಖಂಡರಾದ ಭಾಗ್ಯರಾಜ್, ಶಂಕರ್, ಪ್ರಸಾದ್ ನಾಯಕ್, ಪ್ರದೀಪ್ ಕುರುಬೂರು, ರಾಜೇಶ್, ನಂಜುಂಡಸ್ವಾಮಿ, ಅನಿಲ್ ಹೊಸೂರು, ಗೌರಿಶಂಕರ್, ನಿಂಗರಾಜು, ಅಪ್ಪಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net