ತಿಂಗಳೊಳಗೆ ಹಕ್ಕುಪತ್ರ ನೀಡದಿದ್ದಲ್ಲಿ ಸರ್ಕಾರಕ್ಕೆ ಪತ್ರ

ತಿಂಗಳೊಳಗೆ ಹಕ್ಕುಪತ್ರ ನೀಡದಿದ್ದಲ್ಲಿ ಸರ್ಕಾರಕ್ಕೆ ಪತ್ರ
Published on

ಚ್.ಡಿ.ಕೋಟೆ: ಸಾಗುವಳಿ ಚೀಟಿ, ಹಕ್ಕು ಪತ್ರ ಪಡೆಯಲು ರೈತರು ಸರ್ಕಾರಕ್ಕೆ ಕಿಮ್ಮತ್ತು ಕಟ್ಟಿದರೂ ಕೂಡ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡಿಲ್ಲ. ಒಂದು ತಿಂಗಳೊಳಗೆ ಕ್ರಮ ವಹಿಸದೆ ಇದ್ದರೆ ತಹಸೀಲ್ದಾರ್‌ಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಶಾಸಕರ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ವರ್ಷದ ಹಿಂದೆ ಅಕ್ರಮ ಸಕ್ರಮ ಸಮಿತಿ ನೇತೃತ್ವದಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ನೂರಾರು ರೈತರಿಗೆ ಸಾಗುವಳಿ ಚೀಟಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ನಂತರ ಹಲವಾರು ರೈತರಿಂದ ತಹಸೀಲ್ದಾರ್‌ಗಳು ಸಾಗುವಳಿ ಪತ್ರ ಪಡೆಯಲು ರೈತರಿಂದ ಹಣ ಕಟ್ಟಿಸಿಕೊಳ್ಳಲಾಗಿದೆ. ಕಿಮ್ಮತ್ತು ಕಟ್ಟಿ ಒಂದು ವರ್ಷ ಕಳೆದರೂ ಕೂಡ ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ವಹಿಸದೆ ನಿರ್ಲಕ್ಷೃ ವಹಿಸಲಾಗಿದೆ. ಇದರಿಂದ ನೂರಾರು ರೈತರಿಗೆ ತೊಂದರೆ ಆಗಿದೆ ಮುಂದಿನ ದಿನಗಳಲ್ಲಿ ಸಾಗುವಳಿ ವಿತರಣೆ ಮಾಡದೆ ಇದ್ದರೆ ಕ್ರಮವಹಿಸುವುದಾಗಿ ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಸಾರ್ವಜನಿಕರನ್ನು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸದೆ ಸೂಕ್ತ ಸಮಯದಲ್ಲಿ ಕೆಲಸ ಮಾಡಿಕೊಡಿ, ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ಹೊರತು ಪಡಿಸಿ ಉಳಿದ ದೂರುಗಳನ್ನು ಇನ್ನೂ ಹದಿನೈದು ದಿನಗಳ ಒಳಗೆ ಸಮಸ್ಯೆ ಬಗೆಹರಿಸಬೇಕು. ಮುಂದಿನ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮತ್ತೆ ಇದೇ ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ನಾನು ಸುಮ್ಮನೆ ಇರುವುದಿಲ್ಲ ಎಂದು ಗುಡುಗಿದರು.

ಜಮೀನಿಗೆ ತಿರುಗಾಡಲು ರಸ್ತೆ, ಸಾಗುವಳಿ ಚೀಟಿ, ಹಕ್ಕು ಪತ್ರ, ಆದಿವಾಸಿಗಳಿಗೆ ಮೂಲ ಸೌಕರ್ಯ, ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ವಾಸಿಸಲು ಮನೆ ಇಲ್ಲ, ಮನೆ ಕಟ್ಟಲು ಜಾಗ ಇಲ್ಲ ಸೇರಿದಂತೆ ನೂರಾರು ದೂರುಗಳು ಕೇಳಿಬಂದವು.

ಎಲ್ಲಾ ಅರ್ಜಿಗಳನ್ನು ಖುದ್ದು ಪರಿಶೀಲನೆ ನಡೆಸಿದ ಶಾಸಕರು ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜನ ಸ್ಪಂದನ ಕಾರ್ಯಕ್ರಮಕ್ಕೆ ಬಾರದ ಅಧಿಕಾರಿಗಳಿಗೆ ನೋಟೀಸ್ ನೀಡಲು ತಹಸೀಲ್ದಾರ್ ಸೂಚಿಸಿದರು.

ಪುರಸಭಾ ಸದಸ್ಯ ವೆಂಕಟೇಶ್ ಮಾತನಾಡಿ, ಪುರಸಭಾ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಂಜಿನಿಯರ್ ವಾರದಲ್ಲಿ ಒಂದು ದಿನ ಕೂಡ ಕಚೇರಿಗೆ ಬರುವುದಿಲ್ಲ. ಬಂದರು ಕೂಡ ಯಾವುದೇ ಕಾಮಗಾರಿ ವೀಕ್ಷಣೆಗೆ ತೆರಳದೆ ಕಾಲಹರಣ ಮಾಡುತ್ತಿದ್ದಾರೆ. ಸದಸ್ಯರು ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ. ಇದರಿಂದ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಿನ್ನಡೆ ಉಂಟಾಗಿದೆ. ಬೇರೆ ಇಂಜಿನಿಯರ್ ನಿಯೋಜನೆ ಮಾಡಬೇಕು ಎಂದರು. ಇದಕ್ಕೆ ಪುಷ್ಟಿ ನೀಡುವಂತೆ ಪುರಸಭಾ ಮುಖ್ಯಾಧಿಕಾರಿ ಕೂಡ ಪುರಸಭಾ ಸದಸ್ಯರ ಮಾತಿಗೆ ಕೈಜೋಡಿಸಿದರು.

ಇಂಜಿನಿಯರ್ ಕೆಲಸ ಮಾಡದೆ ಇದ್ದರೆ, ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಲೋಕೋಪಯೋಗಿ ಇಲಾಖೆಯಲ್ಲಿ ಇರುವ ಇಂಜಿನಿಯರ್‌ನ್ನು ಪುರಸಭಾ ಕಾರ್ಯಾಲಯಕ್ಕೆ ನಿಯೋಜನೆ ಮಾಡುವಂತೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ಗೆ ಸೂಚಿಸಿದರು.
ಆದಿವಾಸಿ ಮುಖಂಡ ವಿಜಯಕುಮಾರ್ ಮಾತನಾಡಿ, ಮುಜಾಫರ್ ಅಸಾಧಿ ವರದಿ ಜಾರಿಯಾಗದೆ ಇರುವುದರಿಂದ ಆದಿವಾಸಿಗಳಿಗೆ ಸರ್ಕಾರದ ವತಿಯಿಂದ ಸಿಗಬೇಕಾದ ಮೂಲ ಸೌಲಭ್ಯಗಳು ಸಿಗದೆ ತೊಂದರೆಯಾಗಿದೆ ಎಂದರು.

ತಹಸೀಲ್ದಾರ್ ಶ್ರೀನಿವಾಸ್, ರುಕೀಯಾ ಬೇಗಂ, ಇಒ ಧರಣೀಶ್, ಸುಷ್ಮಾ, ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಪೊಲೀಸ್ ಇನ್ಸ್‌ಪ್ಪೆಕ್ಟರ್ ಶಬ್ಬೀರ್ ಹುಸೇನ್, ಸಿಡಿಪಿಒ ಆಶಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ್, ಜಿ.ಪಂ. ಎಇಇ ನಾಗರಾಜು, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಎಇಇ ಬೋರಯ್ಯ, ಮೈಮುಲ್ ನಿರ್ದೇಶಕ ಈರೇಗೌಡ, ಸಣ್ಣಕುಮಾರ್, ಕಾಳಪ್ಪಾಜಿ, ಜಿ.ಜಿ. ಕಾಲನಿ ರವಿ, ರಘು ವಡ್ಡರಗುಡಿ, ಶುಂಭುಲಿಂಗನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net