ತಂಬಾಕು ಹುಡಿ ಮಾರಾಟಕ್ಕೆ ಅವಕಾಶ

DunhillEarlyMorningPipeMurrays
Published on

ಪಿರಿಯಾಪಟ್ಟಣ: 2022-23ನೇ ಹರಾಜು ಸಾಲಿನಲ್ಲಿ ತಂಬಾಕು ಹುಡಿ(ಬಿಟ್ಸ್)ಯನ್ನು ತಂಬಾಕು ಮಂಡಳಿಯಲ್ಲಿ ಹರಾಜು ಮಾಡಲಾಗುವುದು ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಅಧಿಕಾರಿ ಎಂ.ಲಕ್ಷ್ಮಣರಾವ್ ತಿಳಿಸಿದ್ದಾರೆ.


ತಂಬಾಕು ಬೆಳೆಗಾರರು ತಮ್ಮ ಬಳಿ ಇರುವ ಹುಡಿಯನ್ನು ಕಡಿಮೆ ಬೆಲೆಗೆ ಹೊರಗಡೆ ಮಾರಾಟ ಮಾಡುವ ಬದಲು ತಂಬಾಕು ಮಂಡಳಿಯಲ್ಲಿ ನಿಗದಿಪಡಿಸುವ ದಿನಾಂಕದಂದು ಉತ್ತಮ ದರಕ್ಕೆ ಮಾರಾಟ ಮಾಡುವಂತೆ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ತಂಬಾಕು ಉತ್ಪಾದನೆ ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಪ್ರಮಾಣ ಹೆಚ್ಚಿರುವುದರಿಂದ ರಾಜ್ಯದ ತಂಬಾಕಿಗೆ ಉತ್ತಮ ದರ ದೊರಕುವ ನಿರೀಕ್ಷೆಯಿದೆ. 2021-22ನೇ ಸಾಲಿನಲ್ಲಿ ತಂಬಾಕು ಮಾರಾಟ ಮಾಡಿದ ಹಣ 11ನೇ ದಿನಕ್ಕೆ ರೈತರ ಖಾತೆಗೆ ಜಮಾ ಆಗುತ್ತಿತ್ತು, 2022-23ನೇ ಸಾಲಿನಲ್ಲಿ 9ನೇ ದಿನದಂದೇ ಜಮೆ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.


ಅ.10 ರ ಸೋಮವಾರದಿಂದ ಆರಂಭಗೊಂಡಿರುವ ಪ್ರಸಕ್ತ ಸಾಲಿನ ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಆರಂಭದ ದಿನದಿಂದಲೇ 29 ಖರೀದಿದಾರ ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ 212 ರೂ. ದರ ನೀಡುತ್ತಿದ್ದು, ಬೇಡಿಕೆಯ ಪ್ರಮಾಣ ಹೆಚ್ಚಿರುವುದರಿಂದ ದರ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸಕ್ತ ಸಾಲಿನಲ್ಲಿ 100 ಮಿಲಿಯನ್ ಕೆ.ಜಿ. ತಂಬಾಕು ಉತ್ಪಾದನೆಗೆ ಅನುಮತಿ ನೀಡಲಾಗಿತ್ತು, ಆದರೆ ಇತ್ತೀಚಿನ ತಂಬಾಕು ಮಂಡಳಿಯ ಸಮೀಕ್ಷೆಯಂತೆ 62 ಮಿಲಿಯನ್ ತಂಬಾಕು ಬೆಳೆದಿರಬಹುದು. ಮಂಡಳಿಯು ವರ್ಷಕ್ಕೆ ಒಮ್ಮೆ ಮಾತ್ರ ತಂಬಾಕು ಬೆಳೆಯುವಂತೆ ಸೂಚನೆ ನೀಡಿದ್ದರೂ ಕೆಲವು ಖರೀದಿದಾರ ಕಂಪನಿಗಳ ಸೂಚನೆಯಂತೆ ಕೆಲವೆಡೆ ತಂಬಾಕು ಬೆಳೆಗಾರರು ಎರಡನೆಯ ಬೆಳೆಯಾಗಿ ತಂಬಾಕು ಬೆಳೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ತಂಬಾಕು ಮಂಡಳಿಯಾಗಲಿ, ಸಿಟಿಆರ್‌ಐ ಅಗಲಿ ಅಥವಾ ಸರ್ಕಾರವಾಗಲಿ ಯಾವುದೇ ರೀತಿಯಲ್ಲಿ ಜವಾಬ್ದಾರಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಗುಣಮಟ್ಟದ ವರ್ಜಿನಿಯಾ ತಂಬಾಕು ಉತ್ಪಾದನೆಗೆ ಪ್ರಸಿದ್ಧಿಯಾಗಿರುವ ರಾಜ್ಯದ ಬೆಳೆಗಾರರು ತಂಬಾಕು ಬೆಳೆಗೆ ಅನುಕೂಲಕರವಾದ ವಾತಾವರಣದಲ್ಲಿ ತಂಬಾಕು ಬೆಳೆದರೆ ಮಾತ್ರ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ. ವ್ಯತಿರಿಕ್ತ ಹವಾಮಾನದಲ್ಲಿ ಬೆಳೆದರೆ ಗುಣಮಟ್ಟ ವ್ಯತ್ಯಾಸವಾಗುವುದರ ಜತೆಗೆ ದರ ಕುಸಿತವೂ ಆಗಬಹುದು. ಅಕ್ರಮ ತಂಬಾಕು ಮಾರಾಟ ಮತ್ತು ಅಕ್ರಮ ಸಾಗಣೆ ತಡೆಯುವ ನಿಟ್ಟಿನಲ್ಲಿ ತಂಬಾಕು ಮಂಡಳಿಯಿಂದ ವಿಚಕ್ಷಣ ದಳ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಪ್ರಕರಣಗಳು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net