

ಎಚ್.ಡಿ.ಕೋಟೆ: ನಮಗೆ ಆಹಾರ ಬೇಕು, ತಂಬಾಕು ಅಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಬುಧವಾರ ಪಟ್ಟಣದಲ್ಲಿ ಆಯೋಜಿಸಿದ್ದ ತಂಬಾಕು ರಹಿತ ದಿನಾಚರಣೆ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಯುವ ಜನಾಂಗ ಮೋಜಿಗಾಗಿ ಶುರು ಮಾಡುವ ಬೀಡಿ-ಸಿಗರೇಟ್ ಮುಂದಿನ ದಿನಗಳಲ್ಲಿ ಅವು ನಮ್ಮ ದೇಹವನ್ನೇ ತಿನ್ನುತ್ತವೆ ಎನ್ನುವ ಅರಿವು ಇರುವುದಿಲ್ಲ. ಧೂಮಪಾನದಿಂದ ಸ್ವಲ್ಪಮಟ್ಟಿಗೆ ಒತ್ತಡ ಕಡಿಮೆ ಆಗುತ್ತದೆ ಎನ್ನುವುದು ಸುಳ್ಳು. ಬೀಡಿ ಅಥವಾ ಸಿಗರೇಟ್ ಸೇವನೆಯಿಂದ ರಕ್ತದಲ್ಲಿ ಪರಿಚಲನೆ ಉಂಟಾಗಿ ಇನ್ನೂ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯ ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ಹಾಗಾಗಿ ತಂಬಾಕು ಸೇವನೆಯಿಂದ ದೂರ ಇದ್ದರೆ ಉತ್ತಮ ಎಂದು ತಿಳಿಸಿದರು.
ದೇಶದಲ್ಲಿ ತಂಬಾಕು ಸೇವನೆಯಿಂದ ಪ್ರತಿ ದಿನ 2500 ಜನ ಮೃತಪಡುತ್ತಿದ್ದಾರೆ. ವಿಶ್ವದ 10ರಲ್ಲಿ 1 ಸಾವು ತಂಬಾಕಿನಿಂದ ಉಂಟಾಗುತ್ತದೆ. ಕ್ಯಾನ್ಸರ್, ಹೃದಯ ಸಂಬಂಧಿ, ಶ್ವಾಸಕೋಶದ ಕಾಯಿಲೆ, ಪಾರ್ಶ್ಚವಾಯು ತಂಬಾಕು ಸೇವನೆಯಿಂದ ಬರಬಹುದಾಗಿದೆ. 3000 ರಿಂದ 4000 ಅಪಾಯಕಾರಿ ರಾಸಾಯನಿಕಗಳನ್ನು ತಂಬಾಕು ಪದಾರ್ಥಗಳು ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.
ವರ್ಷದ ಘೋಷ ವಾಕ್ಯ: ನಮಗೆ ಆಹಾರ ಬೇಕು….ತಂಬಾಕು ಅಲ್ಲ…ಎಂಬ ಘೋಷ ವಾಕ್ಯದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು. ತಂಬಾಕು ಸೇವನೆಯಿಂದ ಆಗುವ ಮತ್ತು ಆಗಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ರಸ್ತೆ ಬದಿ ವ್ಯಾಪಾರಿಗಳಿಗೆ ಈ ದಿನದಿಂದಲೇ ಬೀಡಿ ಸಿಗರೇಟ್ ಮತ್ತು ತಂಬಾಕಿಗೆ ಸಂಬಂಧಿಸಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡದಂತೆ ಹಾಗೂ ಸೇವಿಸಿದಂತೆ ಮನವಿ ಮಾಡಿದರು. ತಪ್ಪಿದ್ದಲ್ಲಿ 2003 ಕೋಟ್ಪಾ ಅಡಿಯಲ್ಲಿ ತಂಬಾಕು ಮಾರಾಟ ಮಾಡಿದವರಿಗೆ 200 ರೂ. ದಂಡ ವಿಧಿಸಲಾಗುವುದು ಎಂದು ಅರಿವು ಮೂಡಿಸಲಾಯಿತು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸೋಮಣ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ, ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯ ಡಾ.ಸಮಿವುಲ್ಲಾ ಷರೀಫ್ ಇತರರಿದ್ದರು.