ತಂಬಾಕಿಗೆ ರಾಸಾಯನಿಕ ಗೊಬ್ಬರ ನಿರ್ವಹಣೆ ಅಗತ್ಯ

HUN-MAY-18-2(TOBACCO BOARD PROGRAMME)
Published on

ಹುಣಸೂರು: ತಂಬಾಕು ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಸಮರ್ಪಕ ನಿರ್ವಹಣೆ ಅಗತ್ಯವಿದ್ದು, ಎರಡು ಹಂತಗಳಲ್ಲಿ ಗೊಬ್ಬರ ನೀಡಲು ರೈತರು ಕ್ರಮ ವಹಿಸಬೇಕು ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್‌ಐ)ದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಸಲಹೆ ನೀಡಿದರು.


ತಾಲೂಕಿನ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಬುಧವಾರ ತಂಬಾಕು ಮಂಡಳಿ ವತಿಯಿಂದ ಪ್ರಗತಿಪರ ರೈತರಿಗೆ ಆಯೋಜಿಸಿದ್ದ ತಂಬಾಕು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅನುಸರಣೆ ಅರಿವು ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಸಿಂಗಲ್ ಬ್ಯಾರನ್‌ಗೆ ಮಂಡಳಿ ನೀಡುವ 6 ಬ್ಯಾಗ್ ಅಮೋನಿಯಮ್ ಸಲ್ಫೇಟ್, 6 ಬ್ಯಾಗ್ ಎಸ್‌ಒಪಿ ಮತ್ತು 2 ಬ್ಯಾಗ್ ಡಿಎಪಿಗಳನ್ನು ರೈತರು ಎರಡು ಹಂತದಲ್ಲಿ ಸಸಿಗಳಿಗೆ ನೀಡಬೇಕು. ಪ್ರತಿಯೊಂದು ಗೊಬ್ಬರವನ್ನು ಪ್ರತ್ಯೇಕವಾಗಿ ನೀಡುವುದು ಅಗತ್ಯ. ಸಸಿಗಳ ಬೆಳವಣಿಗೆಗೆ ಮತ್ತು ಗುಣಮಟ್ಟದ ಎಲೆಗಳನ್ನು ಪಡೆಯಲು ಇದು ಅವಶ್ಯಕ. ಈ ನಿಟ್ಟಿನಲ್ಲಿ ನರ್ಸರಿಯಲ್ಲಿ ಬೆಳೆದ ಗುಣಮಟ್ಟದ ಸಸಿ ನಾಡಿ ಮಾಡಬೇಕು. ಅಲ್ಲದೆ ನಾಟಿ ಮಾಡಿದ ಸಸಿಗಳ ಕಡೆ ಹೆಚ್ಚಿನ ಗಮನಹರಿಸಿ ವೈಜ್ಞಾನಿಕ ಪದ್ಧತಿ ಅನುಸರಿಸಿದಲ್ಲಿ ಉತ್ತಮ ಇಳುವರಿ ಮತ್ತು ಗುಣಮಟ್ಟದ ಎಲೆಗಳನ್ನು ಪಡೆಯಲು ಸಾಧ್ಯ ಎಂದರು.


ಮಂಡಳಿಯ ಪ್ರಾದೇಶಿಕ ಅಧಿಕಾರಿ ಶಂಭುಲಿಂಗೇ ಗೌಡ ಮಾತನಾಡಿ, ಕೃಷಿಪದ್ಧತಿಯ ಪರಿಕಲ್ಪನೆ ಇಂದು ಬದಲಾಗಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಲ್ಲದೆ ಕೃಷಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಗದಿತ ಪ್ರಮಾಣದ ಗೊಬ್ಬರ ಕೀಟನಾಶಕಗಳ ಬಳಕೆಗೆ ಮುನ್ನ ಕೃಷಿ ವಿಜ್ಞಾನಿಗಳಿಂದ ಸಲಹೆ-ಸೂಚನೆ ಪಡೆಯುವುದು ಸೂಕ್ತ. ರೈತರು ಸಸಿಗಳಲ್ಲಿ ರೋಗಬಾಧೆ ಕಂಡುಬಂದಲಿ ನೇರವಾಗಿ ಔಷಧ ಮಾರಾಟಗಾರರ ಮಳಿಗೆಗಳನ್ನು ಎಡತಾಕುವುದುನ್ನು ಬಿಟ್ಟು ಸಿಟಿಆರ್‌ಐ ವಿಜ್ಞಾನಿಗಳ ಸಲಹೆ ಪಡೆದು ಬಳಸುವುದು ಸೂಕ್ತ ಎಂದು ಕಿವಿಮಾತು ಹೇಳಿದರು.

ಹಿರಿಯ ವಿಜ್ಞಾನಿಗಳಾದ ಡಾ.ಎಂ.ಮಹದೇವಸ್ವಾಮಿ, ಡಾ.ರಾಜಪ್ಪ, ಅಧಿಕಾರಿಗಳಾದ ಚನ್ನ, ಧನರಾಜ್, ಡೋರ್ಗೆ, ಬ್ರಿಜ್ ಭೂಷನ್ ಸೇರಿದಂತೆ ಪ್ರಗತಿಪರ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net