ತಂದೆ ಸಾವಿನ ನಡುವೆಯೇ ಮಗಳ ಮದುವೆ!

20 TKE 4 A
ತಂದೆ ಸಾವಿನ ನಡುವೆಯೂ ಬೀರೂರು ಕಲ್ಯಾಣ ಮಂಟಪದಲ್ಲಿ ನವಜೀವನಕ್ಕೆ ಕಾಲಿಟ್ಟ ಜೋಡಿ.
Published on

ತರೀಕೆರೆ: ಬೀರೂರಿನ ಕಲ್ಯಾಣ ಮಂಟಪವೊಂದು ಸೋಮವಾರ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಯಿತು. ಮಗಳ ಮದುವೆ ದಿನವೇ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಮಾಂಗಲ್ಯ ಧಾರಣೆ ಮುಗಿಯುತ್ತಿದ್ದಂತೆ ಮದುವೆ ಸಂಭ್ರಮದಲ್ಲಿರಬೇಕಿದ್ದ ವಧು, ವರ ಸೇರಿ ಎಲ್ಲರಿಗೂ ಬರಸಿಡಿಲು ಬಡಿದಂಥ ಅನುಭವವಾಗಿದೆ. ಈ ದುರ್ಘಟನೆಯಿಂದ ಇಡೀ ಕಲ್ಯಾಣ ಮಂಟಪಕ್ಕೆ ಹಠಾತ್ತನೇ ಸೂತಕದ ಛಾಯೆ ಆವರಿಸಿತು.

ಮಗಳ ಮದುವೆ ಮುನ್ನಾ ದಿನ ತರೀಕೆರೆ ತಾಲೂಕು ಲಿಂಗದಹಳ್ಳಿ ಸಮೀಪದ ಹುಲಿತಿಮ್ಮಾಪುರದ ಸ್ನೇಹಿತರಿಗೆ ಲಗ್ನಪತ್ರಿಕೆ ಕೊಟ್ಟು ಬರಲು ಬೈಕ್‌ನಲ್ಲಿ ತೆರಳಿದ್ದ ಪಟ್ಟಣದ ನಾಗಪ್ಪ ಕಾಲನಿ ನಿವಾಸಿ ಚಂದ್ರಣ್ಣ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಲಕಾರಿಯಾಗದೆ ಭಾನುವಾರ ಮಧ್ಯಾಹ್ನವೇ ಕೊನೆಯುಸಿರೆಳೆದಿದ್ದರು. ಆದರೆ ತಂದೆ ಸತ್ತ ವಿಷಯ ಗೊತ್ತಾದರೆ ಅದ್ದೂರಿ ಮದುವೆ ಮುರಿದು ಬೀಳಬಹುದೆಂಬ ಆತಂಕದಲ್ಲಿ ಸಂಬಂಧಿಕರು ಸಾವಿನ ಗುಟ್ಟು ಮುಚ್ಚಿಟ್ಟು ಮದುವೆ ಮಾಡಿ ಮುಗಿಸಿದ್ದಾರೆ.

ಭಾನುವಾರ ಆರತಕ್ಷತೆ ಮುಗಿಯುವ ಹೊತ್ತಾದರೂ ಚಂದ್ರಣ್ಣ ಕಲ್ಯಾಣ ಮಂಟಪಕ್ಕೆ ಬಾರದಿದ್ದಾಗ ಪತ್ನಿ ಮತ್ತು ಪುತ್ರಿ ಸಂಬಂಧಿಕರ ಬಳಿ ಕೇಳಿದ್ದಾರೆ. ಸಣ್ಣ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೇನು ಬಂದು ಬಿಡುತ್ತಾರೆಂಬ ಉತ್ತರ ಬಂದ ಮೇಲೆ ಸೋಮವಾರ ಬೆಳಗ್ಗೆ ಮುಹೂರ್ತವೂ ನಡೆದಿದೆ. ಮದುವೆ ಮುಗಿದು ಸ್ವಲ್ಪ ಹೊತ್ತಿನಲ್ಲಿ ಮರಣದ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ನವ ವಧು ದೀಕ್ಷಾ ಮತ್ತು ಆಕೆಯ ತಾಯಿಯ ಆಕ್ರಂದನ ಮುಗಿಲು ಮುಟ್ಟಿತು.

ಮದುವೆ ಬಳಿಕ ಗಂಡನ ಮನೆ ಹೊಸ್ತಿಲು ದಾಟಬೇಕಿದ್ದ ನವವಧು ತಂದೆಯ ಶವ ಸಂಸ್ಕಾರಕ್ಕೆ ತವರು ಮನೆಗೆ ಹಿಂದಿರುಗಿ ಬರುವಂತಾಯಿತು. ಈ ಘಟನೆಯಿಂದ ಇಡೀ ನಾಗಪ್ಪ ಕಾಲನಿ ಶೋಕಸಾಗರದಲ್ಲಿ ಮುಳುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net