

ನಂಜನಗೂಡು: ತಂತ್ರಜ್ಞಾನವನ್ನು ಬಳಸಿಕೊಂಡು ವಿಷಯಾಧಾರಿತ ಕಲಿಕೆಗೆ ಒತ್ತು ನೀಡುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು ಸಹಕಾರಿಯಾಗಲಿದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಮನ್ವಯಾಧಿಕಾರಿ ಹೇಮಂತ್‌ಕುಮಾರ್ ಹೇಳಿದರು.
ತಾಲೂಕಿನ ಎಸ್.ಹೊಸಕೋಟೆ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ ಕಲಿಕಾ ಆಧಾರಿತ ಕಾರ್ಯಾಗಾರ (ಸ್ಟೆಮ್ ಕ್ಲಬ್) ಉದ್ಘಾಟಿಸಿ ಮಾತನಾಡಿದರು.
ನಾವು ವಾಸಿಸುವ ಸುತ್ತಲಿನ ಪರಿಸರದಲ್ಲಿ ವಿಜ್ಞಾನದ ಅಂಶಗಳು ಅಡಗಿವೆ. ವೈಜ್ಞಾನಿಕವಾಗಿ ಚಿಂತಿಸಲು, ವೈಚಾರಿಕವಾಗಿ ವಿಮರ್ಶಿಸಲು ತಂತ್ರಜ್ಞಾನ ಆಧಾರಿತ ಕಲಿಕಾ ಮಾದರಿ ಇಂದಿನ ಯುವಪೀಳಿಗೆಗೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವ ಚಿಂತನಾ ಫೌಂಡೇಷನ್ ಜಿಲ್ಲೆಯ 175 ಶಾಲೆಗಳಲ್ಲಿ ಕಾರ್ಯಾಗಾರ ಹಮ್ಮಿಕೊಂಡು ಶಿಕ್ಷಕರಿಗೆ ತರಬೇತಿ ನೀಡುವ ಜತೆಗೆ, ಮಕ್ಕಳ ಕಲಿಕೆಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.
ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ನಂದಿನಿ, ಇಸಿಒ ರಾಘವೇಂದ್ರ, ಬಿಆರ್‌ಪಿ ಲಕ್ಷ್ಮೀ, ಕಾಂತಾರ ಸಂಸ್ಥೆಯ ರೋಹಿಣಿ, ಕ್ವಿಸ್ಟ್ ಅಲೇನ್ಸ್ ಸಂಸ್ಥೆಯ ನೇಹಾ, ಯುವ ಚಿಂತನಾ ಫೌಂಡೇಷನ್ ಸಂಯೋಜನಾಧಿಕಾರಿ ಮದನ್‌ಮೋಹನ್, ಎಸ್.ಮಹದೇವು, ರಂಜಿತಾ, ಶಿವಕುಮಾರ್ ಉಪಸ್ಥಿತರಿದ್ದರು.
ನಂಜನಗೂಡು ತಾಲೂಕಿನ ಎಸ್.ಹೊಸಕೋಟೆ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಆಧಾರಿತ ಕಾರ್ಯಾಗಾರವನ್ನು ಕ್ರೈಸ್ಟ್ ಸಮನ್ವಯಾಧಿಕಾರಿ ಹೇಮಂತ್‌ಕುಮಾರ್ ಉದ್ಘಾಟಿಸಿದರು. ನಂದಿನಿ, ಮದನ್‌ಮೋಹನ್, ಎಸ್.ಮಹದೇವು ಇತರರಿದ್ದರು.