ಡೆಲ್ಟಾ ಬಳಿಕ ಆತಂಕ ಸೃಷ್ಟಿಸಿದ ಮತ್ತೊಂದು ರೂಪಾಂತರಿ ಪ್ರಭೇದ; ಇಬ್ಬರು ಸೇನಾಧಿಕಾರಿ ಸಹಿತ ಏಳು ಮಂದಿಯಲ್ಲಿ ಪತ್ತೆ

Corona
Published on

ನವದೆಹಲಿ: ಕರೊನಾ ಸೋಂಕಿನ ತೀವ್ರತೆ ತಗ್ಗಿ ನಿರಾಳತೆ ಮನೆ ಮಾಡುತ್ತಿರುವ ಹೊತ್ತಿನಲ್ಲೇ ಮಾರಕ ಡೆಲ್ಟಾ ರೂಪಾಂತರಿಯ ಉಪ-ಪ್ರಭೇದ ‘ಎವೈ.4’ನ ಏಳು ಪ್ರಕರಣಗಳು ಮಧ್ಯಪ್ರದೇಶದ ಇಂದೋರ್​ನಲ್ಲಿ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿದೆ. ಬ್ರಿಟನ್ ಮತ್ತು ಅಮೆರಿಕದಲ್ಲಿ ಮೊದಲು ಎವೈ.4 ಪತ್ತೆಯಾಗಿತ್ತು. ಭಾರತದಲ್ಲಿ ಇದರ ಹಾವಳಿ ಇಲ್ಲವೆಂದು ನಿಟ್ಟುಸಿರು ಬಿಡುತ್ತಿರುವ ನಡುವೆಯೇ ಇಬ್ಬರು ಸೇನಾಧಿಕಾರಿಗಳ ಸಹಿತ ಏಳು ಮಂದಿಯಲ್ಲಿ ಅದು ಕಂಡು ಬಂದಿರುವುದು ಆಘಾತಕ್ಕೆ ಕಾರಣವಾಗಿದೆ. ಮೂಲ ಡೆಲ್ಟಾ ಪ್ರಭೇದಕ್ಕಿಂತ ಎವೈ.4 ವೈರಸ್ ಶೇಕಡ ಹತ್ತು ಪಟ್ಟು ಜಾಸ್ತಿ ವೇಗದಲ್ಲಿ ಹರಡುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ಈ ಮಾರಕ ಉಪ-ಪ್ರಭೇದ ಪತ್ತೆಯಾಗಿದೆ. ಸೆಪ್ಟೆಂಬರ್​ನಲ್ಲಿ ಸಂಗ್ರಹಿಸಲಾದ ಸ್ಯಾಂಪಲ್​ಗಳಲ್ಲಿ ಎವೈ.4 ಇರುವುದು ಖಚಿತಪಟ್ಟಿದೆ ಎಂದು ಪರೀಕ್ಷಾ ವರದಿ ಬಿಡುಗಡೆ ಮಾಡಿರುವ ರಾಷ್ಟ್ರೀಯ ವ್ಯಾಧಿ ನಿಯಂತ್ರಣ ಕೇಂದ್ರ (ಎನ್​ಸಿಡಿಸಿ) ತಿಳಿಸಿದೆ. ಈ ಅಂಶ ಬಯಲಾಗುತ್ತಲೇ ಕರೊನಾ ವೈರಸ್ ಮೇಲಿನ ಕಣ್ಗಾವಲನ್ನು ದೇಶದಲ್ಲಿ ಇನ್ನಷ್ಟು ಬಿಗಿಗೊಳಿಸಲಾಗಿದೆ. ಹೊಸ ಉಪ-ಪ್ರಭೇದವು ಡೆಲ್ಟಾಕ್ಕಿಂತ ವೇಗವಾಗಿ ಪ್ರಸಾರವಾಗುವ ವೈರಸ್ ಆಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬ್ರಿಟನ್​ನಲ್ಲಿ ಅದನ್ನೀಗ ‘ತನಿಖೆಯಲ್ಲಿರುವ ಪ್ರಭೇದ’ (ವೇರಿಯಂಟ್ ಅಂಡರ್ ಇನ್ವೆಸ್ಟಿಗೇಷನ್) ಎಂದು ಘೋಷಿಸಲಾಗಿದೆ. ಇನ್ಸಾಕಾಗ್ ಯೋಜನೆಯಡಿ, ಕರೊನಾಪೀಡಿತ ರೋಗಿಗಳಿಂದ 68,000ಕ್ಕೂ ಅಧಿಕ ಸ್ಯಾಂಪಲ್​ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಚೀನಾದಲ್ಲಿ ಹೊಸ ಪ್ರಕರಣ: ಚೀನಾದಲ್ಲಿ ಸ್ಥಳೀಯವಾಗಿ ಹರಡಿದ ಸೋಂಕಿನ 43 ಹೊಸ ಪ್ರಕರಣಗಳು ಭಾನುವಾರ ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೀಜಿಂಗ್​ನಲ್ಲಿ ನಾಲ್ಕು ಪ್ರಕರಣಗಳು ಕಂಡು ಬಂದಿದ್ದು ರಾಜಧಾನಿಯಲ್ಲಿ ಒಟ್ಟು 13 ಕೇಸ್​ಗಳು ವರದಿಯಾದಂತಾಗಿದೆ. ನಾಲ್ಕೂ ಜನರನ್ನು ಚಿಕಿತ್ಸೆಗಾಗಿ ನಿಯೋಜಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಜಿಂಗ್​ನ ನಾಲ್ಕು ಕೇಸ್​ಗಳಲ್ಲದೆ ದೇಶದ ನಾನಾ ಭಾಗಗಳಲ್ಲಿ 39 ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್​ಎಚ್​ಸಿ) ವಿವರಿಸಿದೆ. 17 ಪ್ರಕರಣಗಳು ಬೇರೆ ಕಡೆಗಳಿಂದ ಹರಡಿದ್ದಾಗಿದೆ. ಶನಿವಾರ ದೇಶದಲ್ಲಿ ಯಾವುದೇ ಕರೊನಾ ಸಾವು ಸಂಭವಿಸಿಲ್ಲ.

ಸೇನಾಧಿಕಾರಿಗಳಲ್ಲಿ ಸೋಂಕು: ಎವೈ.4 ಪ್ರಭೇದದ ಸೋಂಕು ತಗಲಿದ ಏಳು ಜನರಲ್ಲಿ ಇಬ್ಬರು ಮ್ಹೋವ್ ಕಂಟೋನ್ಮೆಂಟ್​ನಲ್ಲಿ ನಿಯುಕ್ತರಾಗಿರುವ ಸೇನಾಧಿಕಾರಿಗಳಾಗಿದ್ದಾರೆ. ಮಹಾರಾಷ್ಟ್ರದ ಶೇಕಡ 1ರಷ್ಟು ಸ್ಯಾಂಪಲ್​ನಲ್ಲಿ ಎವೈ.4 ವೈರಸ್ ಇರುವುದು ಪತ್ತೆಯಾಗಿದೆ. ಇಂದೋರ್ ಜಿಲ್ಲೆಯಲ್ಲಿ ಸೆಪ್ಟೆಂಬರ್​ನಲ್ಲಿ ಕರೊನಾ ಸೋಂಕು ಉಲ್ಬಣಿಸಲು ಈ ಉಪ-ಪ್ರಭೇದವೇ ಕಾರಣ ಎಂದು ಎನ್​ಸಿಡಿಸಿ ವರದಿ ಹೇಳಿದೆ. ಮ್ಹೋವ್​ನಲ್ಲಿರುವ ಆರ್ವಿು ವಾರ್ ಕಾಲೇಜ್​ನ 30 ಟ್ರೇನಿಗಳು ಮತ್ತು ಅಧಿಕಾರಿಗಳು ಸೆಪ್ಟೆಂಬರ್ 23-25ರ ನಡುವೆ ಕೋವಿಡ್ ಪಾಸಿಟಿವ್ ಆಗಿದ್ದರು.

15,906 ಹೊಸ ಕೇಸ್: ಭಾರತದಲ್ಲಿ ಭಾನುವಾರ ಕರೊನಾ ಸೋಂಕಿನ 15,906 ಹೊಸ ಕೇಸ್​ಗಳು ಪತ್ತೆಯಾಗಿವೆ. 561 ರೋಗಿಗಳು ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು ಸಾವಿನ ಸಂಖ್ಯೆ 4,54,269ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 1,72,594ಕ್ಕೆ ಇಳಿದಿದೆ. ದೇಶದಾದ್ಯಂತ ಅಕ್ಟೋಬರ್ 23ರ ವರೆಗೆ 59,97,71,320 ಸ್ಯಾಂಪಲ್​ಗಳ ಪರೀಕ್ಷೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net