

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ವರದಿ ಬಿಡುಗಡೆಯ ತಂತ್ರಗಾರಿಕೆ ಮಾಡಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆದು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದೊಂದು ಎದುರಾಳಿ ಮಣಿಸುವ ತಂತ್ರವಾಗಿದೆ. ಸಿದ್ದರಾಮಯ್ಯ ಅವರ ಅಧಿಕಾರ ಅವಧಿ ಮುಕ್ತಾಯವಾಗುವ ಬೆನ್ನಲ್ಲೇ ಡಿಕೆಶಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಇದಾಗಿದೆ ಎನ್ನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಜಾತಿಗಣತಿ ವೈಜ್ಞಾನಿಕವಾಗಿಲ್ಲ. ಇದನ್ನು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರೇ ಒಪ್ಪುತ್ತಿಲ್ಲ. ಹೀಗಿದ್ದರೂ ತಮ್ಮ ವರದಿ ತರುತ್ತಿರುವ ಉದ್ದೇಶವೇ ಬೇರೆ ಇದೆ ಎನ್ನಿಸುತ್ತದೆ. ನೋಡೋಣ ಯಾವ ಪ್ಲಾೃನ್ ಹೇಗೆ ವರ್ಕ್‌ಔಟ್ ಆಗಲಿದೆ. ಮುಖ್ಯಮಂತ್ರಿ ಒಂದು ಟೆಸ್ಟ್ ಡೋಸ್ ನೀಡಿದ್ದಾರೆ ಅಷ್ಟೇ. ಜಾತಿಗಣತಿ ಮೂಲಕ ಹಗರಣಗಳನ್ನು ಮರೆಮಾಚುವ ಕೆಲಸ ಮಾಡುತ್ತಿದ್ದಾರೆ. ಎಲ್ಲರ ಗಮನ ಬೇರೆಡೆ ಸೆಳೆಯುವ ತಂತ್ರ ಇದಾಗಿದೆ. ಮುಂದೆ ಸರ್ಕಾರದ ವಿರುದ್ಧ ಸಾಧು, ಸಂತರು, ಸಾಹಿತಿಗಳು ಹೊರಾಟಕ್ಕೆ ಇಳಿಯಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಗೋಕಾಕ್ ಮಾದರಿ ಚಳವಳಿ ನಡೆಯಲಿದೆ ಎಂದು ಸೂಚ್ಯವಾಗಿ ಹೇಳಿದರು.