ಡಿ.ಡಿ.ಅರಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಾಂಪಿಯನ್

12
Published on

ಹುಣಸೂರಿನ ಡಿ.ಡಿ.ಅರಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ತಿ.ನರಸೀಪುರದ ಪಿ.ಆರ್.ಎಂ ವಿಜಯ ಕಾಲೇಜು ತಂಡಗಳು ಕ್ರಮವಾಗಿ ಮೈಸೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದವು.

ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸರಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಸ್ಪರ್ಧೆ ನೆರವೇರಿತು.

ಪುರುಷರ ವಿಭಾಗದಲ್ಲಿ ಸ್ನಾತಕೋತ್ತರ ಕ್ರೀಡಾಮಂಡಳಿ ಮಾನಸ ಗಂಗೋತ್ರಿ ತಂಡ ದ್ವಿತೀಯ ಸ್ಥಾನ ಹಾಗೂ ಯುವರಾಜ ಕಾಲೇಜು ತಂಡ ತೃತೀಯ ಸ್ಥಾನ ಪಡೆದವು. ಮಹಿಳೆಯರ ವಿಭಾಗದಲ್ಲಿ ಟೆರೇಷಿಯನ್ ಕಾಲೇಜು ತಂಡ ದ್ವಿತೀಯ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜು ತಂಡ ತೃತೀಯ ಸ್ಥಾನ ಪಡೆದವು.

ಪುರುಷರ ವಿಭಾಗದಲ್ಲಿ ಹುಲ್ಲಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎ.ಆರ್. ರೋಹಿತ್ ನೂತನ ದಾಖಲೆ ನಿರ್ಮಿಸಿದರು. ಎ.ಆರ್. ರೋಹಿತ್ 29.14 ನಿಮಿಷದಲ್ಲಿ (31.37ನಿಮಿಷ ಹಳೆಯ ದಾಖಲೆ) ಓಟ ಪೂರೈಸಿ ದಾಖಲೆ ನಿರ್ಮಿಸಿದರು. ಮಹಿಳಾ ವಿಭಾಗದಲ್ಲಿ ಅಶ್ವಿನಿ ಪೊಲೀಸ್ 39.52 ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ಇದಕ್ಕೂ ಮುನ್ನ ಹಿರಿಯ ವೈದ್ಯಾಧಿಕಾರಿ ಡಾ.ಪಾರ್ಥಸಾರಥಿ ಸ್ಪರ್ಧೆ ಚಾಲನೆ ನೀಡಿದರು. ಸಮಾರೋಪ ಸಮಾರಂಭದಲ್ಲಿ ಸಿಡಿಸಿ ಸದಸ್ಯರಾದ ವರುಣ್, ಡಾ. ಉದಯ್‌ಕುಮಾರ್, ಬಿ.ಡಿ.ಕಾಂತರಾಜು ಬಹುಮಾನ ವಿತರಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಿ.ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net