

ಡಾ.ರಾಜ್‌ಕುಮಾರ್ ಚಿನ್ನವಾದರೆ ಅಪ್ಪು ಅಪರಂಜಿ ಎಂದು ಕವಿ ಜಯಪ್ಪ ಹೊನ್ನಾಳಿ ಬಣ್ಣಿಸಿದರು.
ಡಾ.ರಾಜ್‌ಕುಮಾರ್ ಕಲಾ ಸೇವಾ ಟ್ರಸ್ಟ್ ಡಾ.ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬ ಅಂಗವಾಗಿ ಜಗನ್ಮೋಹನ ಅರಮನೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಅಪ್ಪು ವೆಭವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಡಾ.ರಾಜ್‌ಕುಮಾರ್ ತಂದೆಗೆ ತಕ್ಕ ಮಗನಾದರೆ ಅಪ್ಪು ತಾಯಿಗೆ ತಕ್ಕ ಮಗನಾಗಿದ್ದರು ಎಂದರು.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಅಪ್ಪು 13 ವರ್ಷಗಳ ನಂತರ ನಾಯಕ ನಟನಾಗಿ ಚಿತ್ರರಂಗಕ್ಕೆ ಮರಳಿದರು. ಅವರ ನಟನೆಯ ಹತ್ತು ಚಿತ್ರಗಳು ಶತದಿನೋತ್ಸವ ಆಚರಿಸಿದವು. ಬೇರೆ ಬೇರೆ ಭಾಷೆಗಳಿಗೆ ಹೋಲಿಸಿದರೂ ಬೇರೆ ಯಾವೊಬ್ಬ ನಟನಿಗೂ ಈ ರೀತಿಯ ಯಶಸ್ಸು ಸಿಕ್ಕಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಅಪ್ಪು ನೂರಾರು ಕಲಾವಿದರಿಗೆ ನೆರವಾಗಿದ್ದಾರೆ. ಅವರ ಸಾಯುವ ತನಕ ಈ ವಿಚಾರ ಯಾರಿಗೂ ಗೊತ್ತಾಗದಂತೆ ನೋಡಿಕೊಂಡಿದ್ದರು. ಹೀಗಾಗಿ ಅಪ್ಪು ಯಾವಾಗಲೂ ಜನಮಾನಸದಲ್ಲಿ ನೆಲೆಯಾಗಿರುತ್ತಾರೆ ಎಂದರು.
ಹಿರಿಯ ಸಮಾಜ ಸೇವಕ ಕೆ. ರಘುರಾಂ ಮಾತನಾಡಿ, ಪುನೀತ್ ರಾಜ್‌ಕುಮಾರ್ ಚಿಕ್ಕ ವಯಸ್ಸಿನಲ್ಲಿಯೇ ಅಪಾರ ಹೆಸರು ಮಾಡಿದ್ದರು. ಅವರ ಅಭಿನಯದ ನಾನೇ ರಾಜಕುಮಾರ ಚಿತ್ರವನ್ನು ನೋಡಿ ಪ್ರಭಾವಿತರಾಗಿ ಎಷ್ಟೋ ಜನ ವೃದ್ಧಾಶ್ರಮದಿಂದ ತಂದೆ- ತಾಯಿಯನ್ನು ವಾಪಸ್ ಮನೆಗೆ ಕರೆ ತಂದರು ಎಂದು ಸ್ಮರಿಸಿದರು.
ಈ ನಟ ಇನ್ನೂ ಹಲವಾರು ವರ್ಷಗಳ ಕಾಲ ನಮ್ಮ ನಡುವೆ ಇರಬೇಕಿತ್ತು. ತಾತ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ತಂದೆ ಡಾ.ರಾಜ್‌ಕುಮಾರ್ ಅವರನ್ನು ಸೇರಿಕೊಳ್ಳಲು ತುರ್ತಾಗಿ ನಿರ್ಗಮಿಸಿಬಿಟ್ಟರು ಎಂದು ಭಾವುಕರಾಗಿ ಹೇಳಿದರು.
ಮೇಲುಕೋಟೆ ವೆಂಗೀಪುರ ಮಠದ ಶ್ರೀ ಇಳೆ ಆಳ್ವಾರ್ ಸ್ವಾಮೀಜಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ನಗರಪಾಲಿಕೆ ಗುತ್ತಿಗೆದಾರ ಸಂಘದ ಉದಯ್ ಕುಮಾರ್, ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಶ್ರೀನಿವಾಸ್, ಕಲಾ ಪೋಷಕರಾದ ಸ್ವಾಭಿಮಾನಿ ಶಂಕರ್, ಎಸ್.ಎ. ಮಾರುತಿ, ವಕೀಲ ಚಂದ್ರಶೇಖರ್ ಎಸ್.ಎ. ಮಾರುತಿ ಇದ್ದರು.