

ಮಡಿಕೇರಿ:
ಚುನಾವಣೆ ಸಂದರ್ಭದಲ್ಲಿ ಮಡಿಕೇರಿ ನಗರದಲ್ಲಿ ತನಗೆ ವಿಶೇಷ ಪ್ರೀತಿ ಸಿಕ್ಕಿದ್ದು, ಜನರ ಅಭಿವೃದ್ಧಿಯ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುವುದಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಶುಕ್ರವಾರ ನಡೆದ ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜಕೀಯ ಹರಿವ ನೀರು ಇದ್ದಂತೆ. ಈಗ ಗೆದ್ದವರು ಮತ್ತೆ ಸೋಲಬಹುದು, ಸೋತವರು ಗೆಲ್ಲಲೂ ಬಹುದು. ಆದರೆ ಸಿಕ್ಕಿದ ಅವಕಾಶವನ್ನು ಜನರ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಬಹುಮತದ ಕಾಂಗ್ರೆಸ್ ಸರ್ಕಾರ ಇರುವುದರಿಂದ ಈ ಅವಕಾಶ ಬಳಸಿಕೊಂಡು ಎಲ್ಲರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು.. ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದು ಬೇಡ. ಸಿಕ್ಕಿರುವ ಅವಧಿಯಲ್ಲಿ ಉತ್ತಮ ಕೆಲಸ ಆಗಬೇಕು. ಒಳಗಡೆ ಕುಳಿತು ನಡೆಸುವ ಚರ್ಚೆಗಿಂತ ಫೀಲ್ಡ್‌ಗೆ ಹೋಗಿ ಹೆಚ್ಚು ಕೆಲಸ ಮಾಡಬೇಕು. ವಾರ್ಡ್‌ಗಳಿಗೆ ಭೇಟಿ ಕೊಟ್ಟು ಸಮಸ್ಯೆ ಅರಿತು ಕಾರ್ಯ ನಿರ್ವಹಿಸಬೇಕು. ಪಕ್ಷ ಬೇಧ ಮರೆತು ಕೆಲಸ ಆಗಬೇಕು. ವೈಯಕ್ತಿಕ ವಿಷಯಗಳ ಬಗ್ಗೆ ಚರ್ಚೆ ಬೇಡ. ಜನಪರ ಚರ್ಚೆ ಆಗಬೇಕು. ಸಭೆಗಳಲ್ಲಿ ಅಜೆಂಡಾ ಪ್ರಕಾರವೇ ಚರ್ಚೆಗಳು ನಡೆಯಲಿ ಎಂದರು.
ಕೊಡಗು ಇಡೀ ರಾಜ್ಯಕ್ಕೆ ನೀರು ಕೊಡುತ್ತದೆ. ಆದರೆ ಇಲ್ಲಿಯೇ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ ಎಂದರೆ ಅದು ಅವಮಾನಕರ ವಿಷಯ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು. ಮುಡಾದಲ್ಲಿ ಇರುವ ಅಭಿವೃದ್ಧಿ ನಿಧಿ ಬಳಸಿಕೊಂಡು ಕೂಟುಹೊಳೆ ಪಂಪ್ ಹೌಸ್‌ಗೆ ಹೆಚ್ಚುವರಿ ಪಂಪ್ ಖರೀದಿಸಲು ಸೂಚಿಸಲಾಗಿದೆ. ಈ ಪಂಪ್ ಅನ್ನು ಉಳಿದೆರಡು ಪಂಪ್‌ಗಳು ಹಾಳಾದಾದ ಪರ್ಯಾಯವಾಗಿ ಉಪಯೋಗಿಸಬಹುದು ಎಂದು ಸಲಹೆ ನೀಡಿದರು.
ಮಡಿಕೇರಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಮಂತರ್ ಗೌಡ, ನಗರದೊಳಗೆ ಕಸ ವಿಂಗಡಣೆ ಮಾಡಿ ನಂತರ ವಿಲೇವಾರಿ ಕೇಂದ್ರಕ್ಕೆ ಕಳಿಸುವುದು ಉತ್ತಮ ಎಂದರು. ಮುಡಾ ಅಭಿವೃದ್ಧಿ ನಿಧಿ ಹಣ ಬಳಸಿಕೊಂಡು ಕ್ರಿಸ್ಟಲ್ ಹಾಲ್ ಬಳಿ ೭ ಎಕರೆ ಕೆರೆ ಮತ್ತು ಪಾರ್ಕ್ ಅಭಿವೃದ್ಧಿ ಮಾಡಲಾಗುವುದು. ಇದಕ್ಕೆ ಆ ಜಾಗದ ದಾನಿಗಳ ಸಲಹೆಯನ್ನೂ ಪಡೆದುಕೊಳ್ಳಲಾಗುವುದು. ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಮಡಿಕೇರಿ ನಗರದ ೭ ಕೆರೆಗಳ ಅಭಿವೃದ್ಧಿ ಮತ್ತು ಶುದ್ಧೀಕರಣಕ್ಕೆ ಯೋಜನೆನ ರೂಪಿಸಲಾಗುವುದ ಎಂದು ಹೇಳಿದರು.
ಮಡಿಕೇರಿ ನಗರದಲ್ಲಿ ಹಕ್ಕು ಪತ್ರ ಇರುವ ಮನೆ ಮಾಲೀಕರಿಗೆ ಖಾತೆ ಮಾಡಿಸಿ ಕೊಡಲು ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ಸರ್ವೆ ಮಾಡಿಸಲಾಗುವುದು. ನಗರಸಭೆಯಲ್ಲಿ ಕೊರತೆ ಇರುವ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು ಶಾಸಕ ಡಾ. ಮಂತರ್ ಗೌಡ ಅವರನ್ನು ಅಭಿನಂದಿಸಿ ಮಾತನಾಡಿದ ಎಸ್‌ಡಿಪಿಐನ ಮನ್ಸೂರ್ ಅಲಿ, ನಗರದಲ್ಲಿ ನೀರು ಮತ್ತು ಮಾರುಕಟ್ಟೆ ಸಮಸ್ಯೆ ಇದೆ. ಬಡವರಿಗೆ ನಿವೇಶನ ಹಂಚಿಕೆ ಆಗಬೇಕಿದೆ. ಅನುದಾನ ತಂದು ಅಭಿವೃದ್ಧಿ ಮಾಡಬೇಕಿದೆ. ಅನುದಾನ ಹಂಚಿಕೆಯಲ್ಲಿ ಸದಸ್ಯರಿಗೆ ತಾರತಮ್ಯ ಮಾಡಬಾರದು ಎಂದರು.
ಬಿಜೆಪಿ ಪರವಾಗಿ ಅಭಿನಂದನೆ ಸಲ್ಲಿಸಿದ ಅರುಣ್ ಜೈನಿ, ಹಿಂದಿನ ಬಿಜೆಪಿ ಶಾಸಕರು ಮಡಿಕೇರಿಗೆ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ. ಆ ಅಭಿವೃದ್ಧಿ ಕಾರ್ಯ ಮುಂದುವರಿಸಬೇಕು ಎಂದರು.
ಬಿಜೆಪಿಯ ರಮೇಶ್ ಮಾತನಾಡಿ ಯಾರೇ ಅಧಿಕಾರಕ್ಕೆ ಬಂದರೂ ಸಮಸ್ಯೆ ಮುಗಿಯಲು ಸಾಧ್ಯವಿಲ್ಲ. ಮನಃಸ್ಸಾಕ್ಷಿ ಮೆಚ್ಚುವಂತೆ ಕೆಲಸ ಮಾಡಬೇಕು. ಮಡಿಕೇರಿ ರಸ್ತೆಗಳು ಹಾಳಾಗಿದೆ. ನಗರ ಬೆಳೆದಿದೆ. ರಸ್ತೆ ಅಭಿವೃದ್ಧಿಗಾಗಿ ೫ ಕೋಟಿ ವಿಶೇಷ ಅನುದಾನ ಕೊಡಿಸಬೇಕು ಎಂದು ಹೇಳಿದರು.
ನಗರದ ೨೩ ವಾರ್ಡ್‌ಗಳಲ್ಲಿ ಎಲ್‌ಇಡಿ ದೀಪ ಅಳವಡಿಸಲು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ಇನ್ನೂ ತನ್ನ ಕೆಲಸ ಮಾಡಿಲ್ಲ. ಹಾಗಾಗಿ ಆತನಿಗೆ ನೊಟೀಸ್ ಕೊಟ್ಟು ಟೆಂಡರ್ ರದ್ದು ಮಾಡುವಂತೆ ಇದೇ ವೇಳೆ ಸೂಚಿಸಿದರು.
ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರು, ಪೌರಾಯುಕ್ತ ವಿಜಯ್ ಹಾಗೂ ಅಧಿಕಾರಿಗಳು ಇದ್ದರು.