

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ 14 ಬದಲಿ ನಿವೇಶನ ಹಂಚಿಕೆ (ಸದ್ಯ ವಾಪಸ್ ಪಡೆದಿರುವ) ಮಾಡಿದ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಡಾ. ಡಿ.ಬಿ. ನಟೇಶ್ ವಿರುದ್ಧ ಜಾರಿಗೊಳಿಸಿದ್ದ ಸಮನ್ಸ್ ರದ್ದುಪಡಿಸಿರುವ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ಪ್ರಶ್ನಿಸಿ ಇಡಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಏ.21ಕ್ಕೆ ವಿಭಾಗೀಯ ಪೀಠ ಮುಂದೂಡಿದೆ
ಈ ಕುರಿತಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ವಿಚಾ ವಿಚಾರಣೆಗೆ ಬಂದಿತ್ತು. ಈ ವೇಳೆ ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಪರ ವಕೀಲರು ಹಾಜರಾಗಿ, ವಾದ ಮಂಡನೆಗೆ ಸಮಯವಾಕಾಶ ನೀಡುವಂತೆ ಮನವಿ ಮಾಡಿದರು.
ಇಡಿ ಪರ ಹಾಜರಿದ್ದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ ಕಾಮತ್ ಅವರು, ಪ್ರಕರಣ ಸಂಬಂಧ ಡಿ.ಬಿ.ನಟೇಶ್ ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳ ವಿರುದ್ಧ ತನಿಖೆ ನಡೆಸಲು ಇದೇ ನ್ಯಾಯಪೀಠ ಅನುಮತಿ ನೀಡಿದೆ.
ಆದರೆ, ಡಿ.ಬಿ.ನಟೇಶ್ ಅವರನ್ನೂ ವಿಚಾರಣೆಗೆ ಒಳಪಡಿಸಬೇಕಿದೆ. ಆದ್ದರಿಂದ ಶೀಘ್ರವಾಗಿ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ನಟೇಶ್ ಪರ ವಕೀಲರ ಮನವಿ ಪರಿಗಣಿಸಿದ ನ್ಯಾಯಪೀಠವು ಮೇಲ್ಮನವಿಯ ವಿಚಾರಣೆಯನ್ನು ಏ.21ಕ್ಕೆ ಮುಂದೂಡಿತು.