

ಚಿತ್ರದುರ್ಗ: ವಿಫಲವಾದ ಪರಿವರ್ತಕದ ಬದಲಾವಣೆಗೆ ಮಧ್ಯವರ್ತಿ, ಏಜೆನ್ಸಿ, ಬೆಸ್ಕಾಂ ಅಧಿಕಾರಿ ಅಥವಾ ನೌಕರರಿಗೆ ಹಣ ಕೊಡಬಾರದು ಎಂದು ರೈತರು, ಸಾರ್ವಜನಿಕರಿಗೆ ಬೆಸ್ಕಾಂ ಮನವಿ ಮಾಡಿದೆ.
ಚಿತ್ರದುರ್ಗ ಗ್ರಾಮೀಣ, ಹೊಳಲ್ಕೆರೆ, ಹೊಸದುರ್ಗ, ಶ್ರೀರಾಂಪುರ ಉಪವಿಭಾಗ ವ್ಯಾಪ್ತಿಯಲ್ಲಿ ಪರಿವರ್ತಕಗಳು ವಿಫಲವಾದರೆ ನಗರ ವ್ಯಾಪ್ತಿಯಲ್ಲಿ 24 ಗಂಟೆಯೊಳಗಾಗಿ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ 72 ಗಂಟೆಯೊಳಗೆ ಬದಲಿಸಬೇಕೆಂಬ ನಿಯಮವಿದೆ.
ಬಫರ್‌ಸ್ಟಾಕ್ ಅಡಿ ಎಲ್ಲ ಉಪವಿಭಾಗಗಳಿಗೆ ಪರಿವರ್ತಕ ಹಂಚಿಕೆ ಮಾಡಲಾಗುತ್ತಿದ್ದು, ಚಿತ್ರದುರ್ಗ ನಗರ ಮತ್ತು ಗ್ರಾಮೀಣ ಉಪವಿಭಾಗದಲ್ಲಿ ಗಜಲಕ್ಷ್ಮೀ ಎಂಟರ್‌ಪ್ರೈಸೆಸ್, ಹೊಳಲ್ಕೆರೆ ಉಪವಿಭಾಗದಲ್ಲಿ ಸಾಯಿರಾಮ್ ಎಂಟರ್‌ಪ್ರೈಸೆಸ್ ಹಾಗೂ ಹೊಸದುರ್ಗ ಮತ್ತು ಶ್ರೀರಾಂಪುರ ಉಪವಿಭಾಗದಲ್ಲಿ ವಿಘೇಶ್ವರ ಎಂಟರ್‌ಪ್ರೈಸಸ್ ಏಜೆನ್ಸಿಗಳವರು ಪರಿವರ್ತಕಗಳನ್ನು ದುರಸ್ತಿ ಮಾಡಿ ಸರಬರಾಜು ಮಾಡುತ್ತಿದ್ದಾರೆ.
ಪರಿವರ್ತಕ ಬದಲಾವಣೆಗೆ ಯಾರಾದರೂ ಹಣ ಕೇಳಿದರೆ ಅಥವಾ ದೂರುಗಳಿದ್ದರೆ ಬೆಸ್ಕಾಂ ಅಧಿಕಾರಿಗಳನ್ನು (ಇಇ 9448279014/ಎಇಇ 9449842739) ಸಂಪರ್ಕಿಸುವಂತೆ ಬೆಸ್ಕಾಂ ಎಇ ಜಿ.ತಿಮ್ಮರಾಯ ತಿಳಿಸಿದ್ದಾರೆ.