ಟ್ಯಾಗೋರ್ ಪಾರ್ಕ್‌ನಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಹೈಕೋರ್ಟ್ ತಡೆ

HC
Published on

ಬೆಂಗಳೂರು: ಆರ್.ಟಿ. ನಗರದ ಟ್ಯಾಗೂರ್ ಉದ್ಯಾನದಲ್ಲಿ ಬಿಬಿಎಂಪಿ ನಿರ್ಮಾಣ ಮಾಡುತ್ತಿರುವ ಅಂಗನವಾಡಿ ಕೇಂದ್ರ ಕಟ್ಟಡದ ಕಾಮಗಾರಿಗೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಕಾಮಗಾರಿ ಪ್ರಶ್ನಿಸಿ ಸ್ಥಳೀಯ ನಿವಾಸಿಗಳಾದ ಎಸ್.ಆರ್.ವಾರಂಬಳ್ಳಿ ಮತ್ತು ಸಿ.ಪ್ರಭು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶ ನೀಡಿದೆ. ಇದೇ ವೇಳೆ, ಅರ್ಜಿ ಸಂಬಂಧ ಬಿಬಿಎಂಪಿ ಆಯುಕ್ತರು, ಮುಖ್ಯ ಇಂಜಿನಿಯರ್, ಜಯಮಹಲ್ ವಲಯದ ಸಹಾಯಕ ಇಂಜಿನಿಯರ್ ಹಾಗೂ ಬಿಡಿಎ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರ ಪರ ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿ, ಆರ್.ಟಿ. ನಗರದ 2ನೇ ಹಂತದದಲ್ಲಿರುವ ಟ್ಯಾಗೂರ್ ಉದ್ಯಾನದಲ್ಲಿ ಸ್ತಳೀಯರ ವಿರೋಧದ ನಡುವೆಯೂ ಬಿಬಿಎಂಪಿ 3 ಮಹಡಿಯ ಅಂಗನವಾಡಿ ಕೇಂದ್ರ ನಿರ್ಮಿಸುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಸೆಪ್ಟೆಂಬರ್ ಮೊದಲ ವಾರದಿಂದ ಏಕಾಏಕಿ ಆರಂಭಿಸಲಾಗಿದೆ. ಈಗಾಗಲೇ ಮಕ್ಕಳ ಆಡುವ ಸ್ಥಳ ಅಗೆದು ಹಾಳು ಮಾಡಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿಯ ಕ್ರಮ ಕರ್ನಾಟಕ ಉದ್ಯಾನ, ಆಟದ ಮೈದಾನ ಮತ್ತು ಬಯಲು ಪ್ರದೇಶ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆಗೆ ವಿರುದ್ಧವಾಗಿದೆ. ಉದ್ಯಾನದಿಂದ ಕೇವಲ 50 ಮೀಟರ್ ದೂರದಲ್ಲೇ ಅಂಗನವಾಡಿ ಕೇಂದ್ರವಿದೆ. ಹೀಗಿದ್ದರೂ ಉದ್ಯಾನದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಉದ್ಯಾನಕ್ಕೆ ಬರುವ ಸ್ಥಳೀಯರು, ಮಕ್ಕಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಕಟ್ಟಡ ಕಾಮಗಾರಿ ನಿಲ್ಲಿಸುವಂತೆ, ಉದ್ಯಾನವನ್ನು ಮೊದಲಿನ ಸ್ಥಿತಿಗೆ ತರುವಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೆ ಕಾಮಗಾರಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net