

| ಜಗನ್ನಾಥ್ ಕಾಳೇನಹಳ್ಳಿ ತುಮಕೂರು
ಪ್ರವಾಸಿ ಟ್ಯಾಕ್ಸಿ ಫಲಾನುಭವಿ ಆಯ್ಕೆಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಮೂರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿ 40 ರಿಂದ 50 ಸಾವಿರ ರೂಪಾಯಿವರೆಗೆ ಬೇಡಿಕೆ ಇಡಲಾಗಿದೆ.
ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅಡಿ ಸಹಾಯಧನದೊಂದಿಗೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಒಬಿಸಿ ನಿರುದ್ಯೋಗಿ ಯುವಕರಿಗೆ ನೀಡಲಿರುವ ಟ್ಯಾಕ್ಸಿಗೆ ಫಲಾನುಭವಿಗಳ ಆಯ್ಕೆಯ ಅಂತಿಮ ಪಟ್ಟಿ ಬಹುತೇಕ ಸಿದ್ಧಗೊಂಡಿದೆ. 2018-19ನೇ ಸಾಲಿನ 49 ಪ್ರವಾಸಿ ಟ್ಯಾಕ್ಸಿ ಗುರಿ ಇದ್ದು, 900ಕ್ಕೂ ಹೆಚ್ಚು ನಿರುದ್ಯೋಗಿಗಳು ಅರ್ಜಿಗಳನ್ನು ಸಲ್ಲಿಸಿದ್ದರು. ಕೆಲವು ತಿರಸ್ಕೃತಗೊಂಡು ಉಳಿದ 800 ಮಂದಿಯಲ್ಲಿ 49 ಫಲಾನುಭವಿಗಳನ್ನು ಜ್ಯೇಷ್ಠತೆ, ತಾಲೂಕು ಜನಸಂಖ್ಯೆ ಆಧಾರದ ಮೇಲೆ ಆಯ್ಕೆ ಮಾಡುವ ಅಂತಿಮ ಪ್ರಕ್ರಿಯೆ ನಡೆಯುತ್ತಿದ್ದು, ಈಗ ‘ಮಧ್ಯವರ್ತಿ’ಗಳ ಪ್ರವೇಶವಾಗಿದೆ.
ಮೊಬೈಲ್ ಡೀಲ್: ಬದುಕು ರೂಪಿಸಿಕೊಳ್ಳುವ ನಿರುದ್ಯೋಗಿಗಳನ್ನು ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಹೆಸರು ಹೇಳಿಕೊಂಡೇ ಸುಲಿಗೆ ಮಾಡುವ ಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. ಸಹಾಯಧನ ಪಡೆದು ಟ್ಯಾಕ್ಸಿ ಓಡಿಸುವ ಕನಸು ಈಡೇರಿಸಿಕೊಳ್ಳಬೇಕಾದರೆ ಇಲಾಖೆ ಸಹಾಯಕ ನಿರ್ದೇಶಕರ ನಂಬಿಕಸ್ಥರೆಂದು ಹೇಳಿಕೊಂಡು ಮೊಬೈಲ್ ಕರೆ ಮಾಡುವವರ ಲಂಚದ ಬೇಡಿಕೆಗೆ ಸ್ಪಂದಿಸುವ ಅನಿವಾರ್ಯತೆ ಎದುರಾಗಿದೆ. ಇಲ್ಲವಾದಲ್ಲಿ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಅರ್ಜಿ ಪರಿಶೀಲನೆ ನಡೆಯುತ್ತಿದ್ದು, ನಿಮ್ಮ ಹೆಸರು ಕೈಬಿಟ್ಟು ಹೋಗಲಿದೆ ಎಂಬ ಅಸ್ತ್ರ ಬಳಸಲಾಗುತ್ತಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದು, ಅರ್ಹ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆಯಲಿ ಎಂಬುದು ಬಡ ನಿರುದ್ಯೋಗಿಗಳ ಒತ್ತಾಸೆಯಾಗಿದೆ.
ತಿಂದ ಅನ್ನ ಮೈಗಿಡಿಯಬೇಕಲ್ಲ : ನೀವು ಸಂತೋಷವಾ ಗಿರಬೇಕು. ನಾವು ಸಂತೋಷವಾಗಿರಬೇಕು ಅಲ್ಲವಾ. ನಿಮಗೆ ಕಷ್ಟ ಕೊಟ್ಟು ನಾವು ತಗೊಂಡ್ರೆ. ತಿಂದಿದ್ದ ಅನ್ನ ಮೈಗಿಡಿಯಬೇಕಲ್ಲ.. ಬೆಂಗಳೂರು ಆಫೀಸ್‌ಗೆ ಸ್ಕೂಟ್ನಿಗೆ ಬಂದಿದೆ. ನಿಮಗೆ ಭರವಸೆ ಕೊಟ್ಟ ಮೇಲೆ ಗ್ಯಾರಂಟಿ ಮಾಡಿಸಿಕೊಡ್ತೀನಿ. ಸಹದ್ಯೋಗಿಗಳಿಗೂ ನೋಡ್ಕೋಬೇಕು. ಹೆಡ್ ಆಫೀಸ್‌ನಲ್ಲಿ ವೆರಿಫಿಕೇಷನ್ ಮಾಡ್ತಿರೋದ್ರಿಂದ ನೀವು ಡೀಲ್‌ಗೆ
ಒಪ್ಪಿದ್ರೆ ನಿಮ್ಮ ಹೆಸರು ಇರುತ್ತೆ, ಇಲ್ಲವಾದಲ್ಲಿ ಕೈಬಿಟ್ಟು ಹೋಗಲಿದೆ. ಟೂರಿಸಂ ಆಫೀಸ್‌ನಿಂದ ಕುಮಾರ್ ಹೆಸರಲ್ಲಿ ಫಲಾನುಭವಿಗಳಿಗೆ ಕರೆಮಾಡಿ ಅತ್ಯಂತ ನಯವಾಗಿ ಡೀಲ್ ಮಾಡುತ್ತಿರುವುದು ಇಲಾಖೆ ಮೇಲಧಿಕಾರಿಗಳೇ ಇದರಲ್ಲಿ ಭಾಗಿಯಾಗಿರುವ ಅನುಮಾನಗಳನ್ನು ಹುಟ್ಟುಹಾಕುತ್ತಿದೆ.
ಲೌಡ್‌ಸ್ಪೀಕರ್ ಇಟ್ಟು ಮಾತನಾಡುವೆ: ಫಲಾನುಭವಿಗಳಿಗೆ ಕರೆ ಮಾಡಿ ಕುಮಾರ್ ಎಂಬಾತ ಟೂರಿಸಂ ಇಲಾಖೆಯಿಂದ ಮಾತನಾಡುತ್ತಿರುವುದಾಗಿ ಹೇಳಿ ಅವರ ಜತೆ ಡೀಲ್ ಕುದುರಿಸುವ ಆಡಿಯೋಗಳು ‘ವಿಜಯವಾಣಿ’ಗೆ ಲಭ್ಯವಾಗಿವೆ. ಡೀಲ್‌ಗೆ ಒಪ್ಪಲು ಮಧ್ಯವರ್ತಿ ಅನುಮಾನ ವ್ಯಕ್ತಪಡಿಸಿ ಹಿಂದೇಟು ಹಾಕಿದಾಗ ತುಮಕೂರು ಕಚೇರಿಗೆ ಬನ್ನಿ ಅಲ್ಲಿ ನಿಮ್ಮ ಮುಂದೆಯೇ ಅಧಿಕಾರಿಗೆ ಲೌಡ್‌ಸ್ಪೀಕರ್ ಇಟ್ಟು ಕರೆ ಮಾಡ್ತೀನಿ. ಅವರ ಬಳಿ ಹೋಗಿ ಕುಮಾರ್ ಸರ್ ಮಾತನಾಡಲಿಕ್ಕೆ ಹೇಳಿದ್ರು ಅನ್ನಿ, ನಿಮ್ಮ ಕೆಲಸ ಆಗಲಿದೆ ಎಂದು ಫಲಾನುಭವಿಗಳನ್ನು ಖೆಡ್ಡಾಕ್ಕೆ ಕೆಡವಲಾಗುತ್ತಿದೆ.
103 ಪ್ರವಾಸಿ ಟ್ಯಾಕ್ಸಿಗಳ ಬಾಕಿ: 2018-19ನೇ ಸಾಲಿನಲ್ಲಿ ಎಸ್ಸಿ -23, ಎಸ್ಟಿ-9, ಒಬಿಸಿ-17 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. 2019-20ನೇ ಸಾಲಿನಲ್ಲಿ ಎಸ್ಸಿ-11, ಎಸ್ಟಿ-4, ಒಬಿಸಿ ವರ್ಗಕ್ಕೆ 14 ಟ್ಯಾಕ್ಸಿ ನೀಡಲಾಗುವುದು. ಈಗಾಗಲೇ ಫಲಾನುಭವಿಗಳನ್ನು ಗುರುತಿಸಿದ್ದು ಅಂತಹ 25 ಮಂದಿ ಹಲವು ವರ್ಷಗಳಿಂದ ಸಹಾಯಧನ ಪಡೆದಿಲ್ಲ. ಹಾಗಾಗಿ ಒಟ್ಟು 103 ಫಲಾನುಭವಿಗಳಿಗೆ ಇನ್ನೂ ಟ್ಯಾಕ್ಸಿ ವಿತರಿಸಬೇಕಿದೆ.
ನಿರುದ್ಯೋಗಿ ಗಳು ಟ್ಯಾಕ್ಸಿ ಪಡೆಯಲು ಎಲ್ಲಿಯೂ ಲಂಚ ನೀಡಬೇಕಿಲ್ಲ, ಸರ್ಕಾರದ ನಿಯಮದಂತೆ ಪಾರದರ್ಶಕವಾಗಿ ಆಯ್ಕೆ ನಡೆಯಲಿದೆ. ಪ್ರಸ್ತುತ ಲಾನುಭವಿ ಗಳಿಗೆ ಕರೆ ಮಾಡಿ ಲಂಚಕ್ಕೆ ಬೇಡಿಕೆ ಇಡುತ್ತಿರು ವವರ ಬಗ್ಗೆ ಸೂಕ್ತ ಮಾಹಿತಿ ನೀಡಿದರೆ ತನಿಖೆ ನಡೆಸಿ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು. ಜನರು ನೇರವಾಗಿ ನಮ್ಮ ಕಚೇರಿ ಸಂಪರ್ಕಿಸಬಹುದು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ 2-3 ವರ್ಷದಿಂದ ಪ್ರವಾಸಿ ಟ್ಯಾಕ್ಸಿ ವಿತರಣೆ ಬಾಕಿ ಇದೆ. 2018-19ನೇ ಸಾಲಿನ 49 ಟ್ಯಾಕ್ಸಿ ವಿತರಣೆ ಗುರಿ ಇದ್ದು ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲಾಗುವುದು. ಮಧ್ಯವರ್ತಿಗಳ ಹಾವಳಿ ಬಗ್ಗೆ ಯಾವುದೇ ದೂರು ಬಂದಿಲ್ಲ. ಸುಜಾತಾ ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ 3 ವರ್ಷದ ಹಿಂದೆಯೇ ಪ್ರವಾಸಿ ಟ್ಯಾಕ್ಸಿಗೆ ಅರ್ಜಿ ಸಲ್ಲಿಸಿದ್ದು ಜ್ಯೇಷ್ಠತೆ ಆಧಾರದಲ್ಲಿ ಈ ಬಾರಿಯಾದರೂ ಸಿಗುವ ವಿಶ್ವಾಸ ಇತ್ತು. ಈಗ ನೋಡಿದರೆ ನಿಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಇರಬೇಕೆಂದರೆ ಹಣ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಹೆಸರಲ್ಲೇ ಬೇಡಿಕೆ ಇಡುತ್ತಿದ್ದಾರೆ. 2020-21ರಲ್ಲಿ ಈ ಯೋಜನೆ ಸಹ ಕೈಬಿಡಲಾಗಿದೆ. ಹೆಸರು ಹೇಳಲಿಚ್ಛಿಸದ ಅರ್ಜಿದಾರ ತುಮಕೂರು