ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ: ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು

High court logo
Published on

ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ನಿಖಿತಾ ಸಿಂಘಾನಿಯಾ ಅವರ ಚಿಕ್ಕಪ್ಪ ಸುಶೀಲ್ ಸಿಂಘಾನಿಯಾಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಆರೋಪಿಯು ಪೊಲೀಸರ ಬಂಧನದಿಂದ ಪಾರಾಗಿದ್ದಾರೆ.

ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಅವರ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ, ಭಾಮೈದ ಅನುರಾಗ್ ಸಿಂಘಾನಿಯಾ ಮತ್ತು ಸುಶೀಲ್ ಸಿಂಘಾನಿಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ನಗರದ ಮಾರತ್‌ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಈ ನಾಲ್ಕೂ ಮಂದಿ ಬಂಧನ ಭೀತಿಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ನ ಮೊರೆ ಹೋಗಿದ್ದರು.

ಅಲಹಾಬಾದ್ ಹೈಕೋರ್ಟ್‌ನಲ್ಲಿ ಸುಶೀಲ್ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ೬೯ ವರ್ಷ ವಯಸ್ಸಾಗಿದೆ. ಅಲ್ಲದೆ, ಅವರು ದೀರ್ಘ ಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ, ಸುಶೀಲ್ ಅವರು ಅತುಲ್ ಸುಭಾಷ್‌ರ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಪ್ರಶ್ನೆಯೇ ಇಲ್ಲ ಎಂದು ವಾದ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸುಶೀಲ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.

ಪ್ರಕರಣದ ಇತರೆ ಆರೋಪಿಗಳಾದ ನಿಖಿತಾ, ನಿಶಾ ಮತ್ತು ಅನುರಾಗ್‌ರ ಜಾಮೀನು ಅರ್ಜಿಯ ವಿಚಾರಣೆಗೂ ಮುನ್ನವೇ ಮಾರತ್‌ಹಳ್ಳಿ ಠಾಣೆ ಪೊಲೀಸರು ಆ ಮೂವರನ್ನು ಡಿ.೧೫ರಂದು ಬಂಧಿಸಿದ್ದರು. ನ್ಯಾಯಾಲಯ ಆ ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಮಾರತ್‌ಹಳ್ಳಿ ಬಳಿಯ ಮಂಜುನಾಥ್ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ನೆಲೆಸಿದ್ದ ಉತ್ತರಪ್ರದೇಶ ಮೂಲದ ಅತುಲ್ ಸುಭಾಷ್, ಕೌಟುಂಬಿಕ ಕಲಹದಿಂದ ಮನನೊಂದು ಡಿ.೯ರಂದು ನೇಣು ಹಾಕಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಅವರು ಪತ್ನಿ ನಿಖಿತಾ ಸೇರಿದಂತೆ ನಾಲ್ವರ ವಿರುದ್ಧ ೨೬ ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದರು ಮತ್ತು ೯೦ ನಿಮಿಷಗಳ ಸೆಲ್ಫಿ ವಿಡಿಯೊ ಮಾಡಿ ಅದನ್ನು ಇ-ಮೇಲ್ ಮೂಲಕ ರಾಷ್ಟ್ರಪತಿಗಳು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಸ್ನೇಹಿತರು ಹಾಗೂ ಕಚೇರಿಗೆ ಕಳುಹಿಸಿದ್ದರು. ಅಲ್ಲದೆ, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅತುಲ್ ಸುಭಾಷ್ ಸಾವಿಗೆ ನ್ಯಾಯ ಕೊಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net