ಟಿಪ್ಪರ್‌ಗಳಿಂದ ಪ್ರಾಣಕ್ಕೆ ಕುತ್ತು

Published on

ಗುಂಡ್ಲುಪೇಟೆ: ನಿಯಮ ಬಾಹಿರವಾಗಿ ಟಿಪ್ಪರ್‌ಗಳು ತೊಟ್ಟಿಯ ಎತ್ತರವನ್ನು ಹೆಚ್ಚಿಸಿಕೊಂಡು ಸಾಮರ್ಥ್ಯ ಮೀರಿ ಜಲ್ಲಿ ಕಲ್ಲು ತುಂಬಿಸಿಕೊಂಡು ಸಾಗಿಸುತ್ತಿರುವುದು ಇತರ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿದೆ.
ಹೌದು, ಗುಂಡ್ಲುಪೇಟೆ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಗ್ಗಿಲ್ಲದೆ ಟಿಪ್ಪರ್‌ಗಳು ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಸಾಗಿಸುತ್ತಿವೆ. ಹಿರೀಕಾಟಿ ಗೇಟ್ ಬಳಿಯಿಂದ ಬೇಗೂರು ಸಮೀಪದವರೆಗೂ ರಸ್ತೆಯ ಎರಡು ಬದಿಗಳಲ್ಲೂ ಟಿಪ್ಪರ್‌ಗಳು ಸಾಲುಗಟ್ಟಿ ನಿಲ್ಲುತ್ತಿವೆ. ಹಗಲಿನ ವೇಳೆಯೇ ಈ ಲಾರಿಗಳು ಗಣಿಗಾರಿಕೆ ಸ್ಥಳದಿಂದ ಕಲ್ಲನ್ನು ಇತರೆಡೆ ರಾಜರೋಷವಾಗಿ ಸಾಗಿಸುತ್ತಿವೆ. ಇದರಿಂದ ರಸ್ತೆಯಲ್ಲ ಜಲ್ಲಿಕಲ್ಲು, ಮರಳುಮಯವಾಗಿದೆ. ಅಲ್ಲದೆ, ಇಡೀ ರಸ್ತೆಯೆಲ್ಲ ಧೂಳುಮಯವಾಗಿದ್ದು, ಎದುರುಗಡೆಯಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ಕಣ್ಣಿಗೆ ಧೂಳು ತುಂಬುವುದರಿಂದ ವಾಹನ ಚಲಾಯಿಸುವುದೇ ಕಷ್ಟವಾಗಿದ್ದು, ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದೆಲ್ಲವನ್ನು ಕೇಳಬೇಕಾದ ಜನಪ್ರತಿನಿಧಿಗಳೇ ಈ ಅಕ್ರಮ ಗಣಿಗಾರಿಕೆಯ ಮಾಲೀಕರಾಗಿದ್ದಾರೆ. ಅಧಿಕಾರಿಗಳಿಗೆ ಮಾಮೂಲಿ ಹೋಗುವುದರಿಂದ ಮೂಕಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಹಾಗಾಗಿ, ಬೇಲಿಯೇ ಎದ್ದು ಹೊಲ ಮೇಯ್ದದಂತಿದೆ ಇಲ್ಲಿನ ಪರಿಸ್ಥಿತಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸುತ್ತಮುತ್ತ ಹಾಗೂ ತಾಲೂಕಿನ ಗ್ರಾಮಾಂತರ ಪ್ರದೇಶಗಳ ಹಲವಾರು ಕಡೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ತಾಲೂಕಿನ ಬೇಗೂರು ಹೋಬಳಿಯ ಗರಗನಹಳ್ಳಿ, ಹಿರೀಕಾಟಿ, ಬೆಳಚಲವಾಡಿ, ತೋಂಡವಾಡಿ, ಹಸಗೂಲಿ, ಕಸಬಾ ಹೋಬಳಿಯ ಮಡಹಳ್ಳಿ ಹಾಗೂ ತೆರಕಣಾಂಬಿ ಸುತ್ತಮುತ್ತಲೂ ಸುಮಾರು 25ಕ್ಕೂ ಹೆಚ್ಚಿನ ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ಪ್ರತಿ ದಿನವೂ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿರುವ ಗಣಿಗಳಿಂದ ಕಲ್ಲು ಪೂರೈಕೆ ಮಾಡಲಾಗುತ್ತಿದೆ ಎಂಬುದು ಇಲ್ಲಿನ ನಿವಾಸಿಗಳ ದೂರಾಗಿದೆ.
ಸಾಮರ್ಥ್ಯ ಮೀರಿ ಕಲ್ಲು ಸಾಗಣೆ:
ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಮುಂತಾದ ಸ್ಥಳಗಳಿಗೆ ಜಲ್ಲಿ ಮತ್ತು ಎಂ-ಸ್ಯಾಂಡ್ ಕೊಂಡೊಯ್ಯುವ ಎಲ್ಲ ವಾಹನಗಳು ಸಾಮರ್ಥ್ಯ ಮೀರಿ ಕಲ್ಲು ತುಂಬಿಕೊಂಡು ಸಾಗಿಸುತ್ತಿವೆ. 15 ಟನ್ ಸಾಮರ್ಥ್ಯದ ಟಿಪ್ಪರ್‌ಗಳು 30 ರಿಂದ 40 ಟನ್, 20 ಟನ್ ಸಾಮರ್ಥ್ಯದ ಗಾಡಿಗಳಲ್ಲಿ 45-55 ಟನ್ ತೂಕದ ಮಾಲು ತುಂಬಿ ಸಾಗಣೆ ಮಾಡಲಾಗುತ್ತಿದೆ. ಇದರಿಂದ ಗ್ರಾಮಾಂತರ ಪ್ರದೇಶಗಳ ರಸ್ತೆಗಳು ಹಾಳಾಗುತ್ತಿವೆ. ನೂರಾರು ವರ್ಷ ಬಾಳಿಕೆ ಬರಬೇಕಾದ ಸೇತುವೆಗಳು ಕುಸಿಯುತ್ತಿವೆ. ರಸ್ತೆಯ ಉಬ್ಬುಗಳು ಹಾಗೂ ತಿರುವುಗಳಲ್ಲಿ ಮರಳು ಹಾಗೂ ಜಲ್ಲಿಕಲ್ಲುಗಳು ಹೊರಚೆಲ್ಲಿ ರಸ್ತೆಗೆ ಬೀಳುತ್ತಿವೆ. ಇದರಿಂದ ಈ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ಸವಾರರು ಪ್ರತಿ ದಿನವೂ ತುಂಬ ತೊಂದರೆ ಅನುಭವಿಸುವಂತಾಗಿದೆ.
ಕಣ್ಣಿಗೆ ಧೂಳು ಬೀಳುವುದರಿಂದ ಅವಘಡ:

ಗಾಳಿಗೆ ಹೊರಚೆಲ್ಲುವ ಎಂ-ಸ್ಯಾಂಡ್‌ನ ಧೂಳು ಕಣ್ಣಿಗೆ ಬಿದ್ದು ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನಗಳ ಸವಾರರು ತಿರುವುಗಳಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬೀಳುತ್ತಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಮೊನಚಾದ ಜಲ್ಲಿ ಕಲ್ಲುಗಳಿಂದ ಬಸ್ಸು, ಕಾರು, ಬೈಕ್ ಇತರ ವಾಹನಗಳ ಚಕ್ರಗಳಿಗೆ ಚುಚ್ಚಿ ಪಂಕ್ಚರ್ ಆಗುತ್ತಿವೆ. ಎರಡು ವರ್ಷಗಳ ಹಿಂದೆ ಬೇಗೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಲ್ಲಿದ್ದ ಜಲ್ಲಿಕಲ್ಲಿನ ಮೇಲೆ ಹತ್ತಿದ ಕಾರಿನ ಚಕ್ರ ಪಂಕ್ಚರ್ ಆಗಿದ್ದರಿಂದ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ನಾಲ್ವರು ಪ್ರಯಾಣಿಕರು ಸಾವಿಗೀಡಾಗಿದ್ದರು. ಇಷ್ಟಾದರೂ ಪ್ರಾದೇಶಿಕ ಸಾರಿಗೆ ಇಲಾಖೆಯಾಗಲಿ ಪೊಲೀಸರಾಗಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟ್ಸ್
ಸಾಮರ್ಥ್ಯಕ್ಕಿಂತ ಅಧಿಕ ಭಾರ ಹೊತ್ತ ವಾಹನಗಳ ಸಂಚಾರದಿಂದ ಸಮಸ್ಯೆಗಳಾಗುತ್ತಿರುವ ಬಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಪತ್ರ ಬರೆದು ಜಂಟಿ ಕಾರ್ಯಾಚರಣೆ ನಡೆಸುವಂತೆ ಕೋರಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗುವುದು.
ಪದ್ಮಿನಿ ಸಾಹೂ

ಎಸ್‌ಪಿ, ಚಾಮರಾಜನಗರ

ಈ ಬಗ್ಗೆ ಓವರ್‌ಲೋಡ್ ಸಾಗಣೆ ಮಾಡುವ ಹಾಗೂ ನಿಯಮ ಬಾಹಿರವಾಗಿ ಟಿಪ್ಪರ್‌ಗಳ ಬಾಡಿ ಎತ್ತರಿಸಿರುವ ವಾಹನಗಳ ಪತ್ತೆ ಹಾಗೂ ಅವುಗಳ ವಿರುದ್ಧ ಕ್ರಮಕೈಗೊಳ್ಳಲು ಸಾರಿಗೆ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗುವುದು.
ಗಾಯತ್ರಿ
ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net