ಜೋಳದ ಬಿತ್ತನೆ ಬೀಜಕ್ಕೆ ಸರ್ಕಾರದ ಸಹಾಯಧನ

17-02-rama-Horti
Published on

ರಾಮನಗರ : ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆದಿರುವ ಲಾನುಭವಿಗಳ ತೋಟ ಹಾಗೂ ಸಂಸ್ಕರಣಾ ಘಟಕಕ್ಕೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ರಾಜೇಂದ್ರ ಕುಮಾರ್ ಕಟಾರಿಯ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯ ಗೋದೂರು ಗ್ರಾಮದ ಸುಂದರ್ ರಾಜ್ ಅವರು ತೋಟಗಾರಿಕೆ ಇಲಾಖೆಯಿಂದ ಹಸಿರು ಮನೆ ನಿರ್ಮಾಣಕ್ಕೆ 17.52 ಲಕ್ಷ ರೂ, ಹಸಿರು ಮನೆಯಲ್ಲಿ ಬೆಳೆ ಪದ್ಧತಿಗೆ 2.50 ಲಕ್ಷ ರೂ ಹಾಗೂ ಮಾವಿನ ಬೆಳೆಗೆ ಸೂಕ್ಷ್ಮ ನೀರಾವರಿ ಅಳವಡಿಕೆಗೆ 55 ಸಾವಿರ ರೂ ಸಹಾಯಧನ ಪಡೆದಿದ್ದು, ಇವರ ತೋಟಕ್ಕೆ ಭೇಟಿ ನೀಡಿದ್ದ ಕಟಾರಿಯ ಲಾನುಭವಿಗಳ ಜತೆ ಸಂವಾದ ನಡೆಸಿದರು.

ಫಲಾನುಭವಿ ಸುಂದರ್‌ರಾಜ್ ಮಾತನಾಡಿ, ಹಸಿರು ಮನೆಯಲ್ಲಿ ದೊಣ್ಣೆ ಮೆಣಸಿನಕಾಯಿ ಬೆಳೆದಿದ್ದು, ಒಟ್ಟು 40 ಟನ್ ಇಳುವರಿ ನಿರೀಕ್ಷೆಯಲ್ಲಿದ್ದೇನೆ. ಈಗಾಗಲೇ 15 ಟನ್ ಪಡೆಯಲಾಗಿದೆ.

ಹಸಿರು ಮನೆಗೆ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂನವರು ವಾಣಿಜ್ಯ ಬಳಕೆ ಎಂದು ಪರಿಗಣಿಸಿದರೆ ವಿದ್ಯುತ್ ಬಿಲ್ ಹೆಚ್ಚು ಬರುತ್ತದೆ. ಇದನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ಪರಿಹಾರ ಮಾಡಿಕೊಡುವಂತೆ ಕಟಾರಿಯ ಅವರಿಗೆ ಮನವಿ ಮಾಡಿದರು.

ರೇಷ್ಮೆ ಇಲಾಖೆ ಹೆಚ್ಚುವರಿ ನಿರ್ದೇಶಕ ನಾಗಭೂಷಣ್, ಜಂಟಿ ನಿರ್ದೇಶಕ ಸಿ.ಸಿ. ಕುಮಾರ್, ರೇಷ್ಮೆ ಇಲಾಖೆ ಉಪನಿರ್ದೇಶಕ ಡಿ. ಪುಟ್ಟಸ್ವಾಮಿ ಹಾಗೂ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ ಉಪಸ್ಥಿತರಿದ್ದರು.

ದರ ಏರಿಕೆ ಸಂಭವ

ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ವಿ.ಎಂ. ಕಾರ್ನ್ ಎಕ್ಸ್‌ಪೋರ್ಟ್ ಬೇಬಿ ಕಾರ್ನ್ ಸಂಸ್ಕರಣಾ ಘಟಕ ಸ್ಥಾಪನೆಗೆ 2 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಸರ್ಕಾರದಿಂದ 17.50 ಲಕ್ಷ ರೂ. ಸಹಾಯಧನ ಪಡೆಯಲಾಗಿದೆ. ಚನ್ನಪಟ್ಟಣ ಹಾಗೂ ರಾಮನಗರ ತಾಲೂಕಿನ ರೈತರಿಂದ 35 ಟನ್‌ಗಳಷ್ಟು ಬೇಬಿ ಕಾರ್ನ್ ಸಂಗ್ರಹಿಸಿ, ಸಂಸ್ಕರಣೆ, ಪ್ಯಾಕಿಂಗ್ ಹಾಗೂ ಮಾರಾಟ ಮಾಡಲಾಗುತ್ತಿದೆ. 2500 ರೈತರಿಗೆ ಬೇಬಿ ಕಾರ್ನ್ ಬೀಜ ಸರಬರಾಜು ಮಾಡಿ ಬಿತ್ತನೆ ಮಾಡಿಸಿ ವರ್ಷವಿಡೀ ಸಂಗ್ರಹಿಸಲಾಗುತ್ತಿದೆ. ಬೇಬಿಕಾರ್ನ್ ಬಿತ್ತನೆ ಬೀಜವನ್ನು ಒಂದೇ ಸಂಸ್ಥೆ ಉತ್ಪಾದನೆ ಮಾಡುತ್ತಿದ್ದು, ದರ ಏರಿಕೆ ಸಂಭವವಿರುತ್ತದೆ. ಆದ್ದರಿಂದ ಸರ್ಕಾರದ ವತಿಯಿಂದ ಬೇಬಿಕಾರ್ನ್ ಬಿತ್ತನೆ ಬೀಜಕ್ಕೆ ಸಹಾಯಧನ ನೀಡಬೇಕು ಎಂದು ಘಟಕದ ಮಾಲೀಕ ವಸಂತ್ ಕುಮಾರ್ ಇದೇ ವೇಳೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net