ಜೋಡಿ ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ

crime'
Published on

ಜೋಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮೈಸೂರಿನ ಏಳನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಸಿರು ಇರುವವರೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನಂಜನಗೂಡು ತಾಲೂಕಿನ ಬಿಳುಗಲಿ ಗ್ರಾಮದ ಪುಟ್ಟರಂಗಮ್ಮ ಮತ್ತು ಆಕೆ ಪುತ್ರಿ ಮಣಿಯನ್ನು ಹತ್ಯೆ ಮಾಡಿದ್ದ ಅದೇ ಗ್ರಾಮದ ರಂಗಸ್ವಾಮಿ ಶಿಕ್ಷೆಗೆ ಗುರಿಯಾದವ.

ಏನಿದು ಪ್ರಕರಣ: ಪುಟ್ಟರಂಗಮ್ಮ ಅವರ ಪುತ್ರ ರಾಜೇಶನೊಂದಿಗೆ ರಂಗಸ್ವಾಮಿ ಪತ್ನಿ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರವಾಗಿ ರಾಜೇಶ ಮತ್ತು ರಂಗಸ್ವಾಮಿ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ರಾಜೇಶ್ ಅವರ ತಾಯಿ ಪುಟ್ಟರಂಗಮ್ಮ ಮತ್ತು ಸೋದರಿ ಮಣಿ ಇಬ್ಬರು ರಂಗಸ್ವಾಮಿಯನ್ನು ಹಂಗಿಸಿ ಅವಮಾನ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ರಂಗಸ್ವಾಮಿ, ಪುಟ್ಟರಂಗಮ್ಮ ಮತ್ತು ಮಣಿ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ನಂಜಗೂಡು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ರಮೇಶ ಅವರು ರಂಗಸ್ವಾಮಿ ಅವರಿಗೆ ಉಸಿರು ಇರುವವರೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ನಾಗರಾಜ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net