ಜೇನು ಸಾಕಾಣಿಕೆಯಿಂದ ರೈತರ ಆದಾಯ ಹೆಚ್ಚಳ

Published on

ಹುಣಸೂರು: ತೆಂಗು, ಅಡಕೆಯಂತಹ ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸಲು ರೈತರು ಜೇನು ಕೃಷಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ ತಿಳಿಸಿದರು.

ನಗರದ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಶನಿವಾರ ಜೇನು ಕೃಷಿ ಕುರಿತು ರೈತರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜೇನುಕೃಷಿ ಅನುಸರಿಸುವುದರ ಮೂಲಕ ರೈತರಿಗೆ ಎರಡು ರೀತಿಯಲ್ಲಿ ಲಾಭವಾಗಲಿದೆ. ಅಡಕೆ, ತೆಂಗು, ಬಾಳೆ ಮುಂತಾದ ತೋಟಗಳಲ್ಲಿ ಜೇನುಕೃಷಿ ಕೈಗೊಂಡಲ್ಲಿ ಜೇನುಹುಳುಗಳು ಸಹಜವಾಗಿ ಪ್ರಕೃತಿಗೆ ನೀಡುತ್ತಿರುವ ಪರಾಗಸ್ಪರ್ಶ ಕ್ರಿಯೆಯು ತೋಟದ ಗಿಡಗಳಿಗೆ ಲಭಿಸುವ ಮೂಲಕ ಇಳುವರಿ ಹೆಚ್ಚಲಿದೆ. ಮಾತ್ರವಲ್ಲದೆ ಇಂದು ಜೇನುತುಪ್ಪಕ್ಕೆ ಬಹುಬೇಡಿಕೆಯಿದ್ದು, ಉತ್ತಮ ಆರ್ಥಿಕ ಲಾಭ ತಂದುಕೊಡಲಿದೆ. ಒಂದೆಡೆ ಪರಾಗಸ್ಪರ್ಶದಿಂದಾಗಿ ತೋಟದಲ್ಲಿನ ಬೆಳೆಗಳ ಇಳುವರಿ ಹೆಚ್ಚುವ ಮೂಲಕ ಅಲ್ಲಿಯೂ ಆರ್ಥಿಕವಾಗಿ ಲಾಭ ನೀಡಿದರೆ ಮತ್ತೊಂದೆಡೆ ಜೇನು ತುಪ್ಪದಿಂದ ಲಾಭ ಗಳಿಸಬಹುದಾಗಿದೆ. ತೋಟಗಾರಿಕೆ ಇಲಾಖೆಯಿಂದ ಜೇನುಕೃಷಿಯ ಪೆಟ್ಟಿಗೆಗೆ ಶೇ.75ರಷ್ಟು ಆರ್ಥಿಕ ರಿಯಾಯಿತಿ ನೀಡುತ್ತಿದ್ದು, 45 ಸಾವಿರ ರೂ.ಗಳ ಜೇನುಪೆಟ್ಟಿಗೆಗೆ 3500 ರೂ.ಗಳಿಗೂ ಹೆಚ್ಚು ಸಬ್ಸಿಡಿ ದೊರಕಲಿದೆ.

ಕಾರ್ಯಕ್ರಮದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಹೊಂಬೇಗೌಡ, ನಿತಿನ್, ಎಸ್.ಎ.ಚೈತ್ರಾ, ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net