

ಸೋಮವಾರಪೇಟೆ: ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಸೂಕ್ತ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡಲಿದ್ದು, ಪಕ್ಷದ ಕಾರ್ಯಕರ್ತರು ವಿಚಲಿತರಾಗಬಾರದು ಎಂದು ಮಡಿಕೇರಿ ಕ್ಷೇತ್ರ ಸಮಿತಿ ಜೆಡಿಎಸ್ ಅಧ್ಯಕ್ಷ ಎಚ್.ಆರ್.ಸುರೇಶ್ ಭರವಸೆ ನೀಡಿದರು.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಜನವಿರೋಧಿ ನೀತಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಿಂದ ಮಾತ್ರ ಉತ್ತಮ ಆಡಳಿತವನ್ನು ನಿರೀಕ್ಷೆ ಮಾಡಬಹುದು ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರ ಜನಪರ ಯೋಜನೆಗಳು ಇವತ್ತಿಗೂ ಜನಪ್ರಿಯವಾಗಿವೆ. ರೈತರ ಸಾಲ ಮನ್ನಾ, ಕಾರ್ಮಿಕರು ಹಾಗೂ ಬಡಜನತೆ, ಮಹಿಳೆಯರಿಗೆ ಒಳ್ಳೆಯ ಯೋಜನೆಗಳನ್ನು ರೂಪಿಸಿ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಿದ್ದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ದುರಾಡಳಿತದಿಂದ ದೇಶವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಯೊಬ್ಬರೂ ದುಡಿದ ಹಣದಲ್ಲಿ ಶೇ.60ರಷ್ಟನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಕಾಮಗಾರಿಗಳಿಗೆ ವಿನಿಯೋಗಿಸಿ ಅದರಲ್ಲಿ ಶೇ.40ರಷ್ಟನ್ನು ಕಮಿಷನ್ ಪಡೆಯುತ್ತಿದ್ದಾರೆ. ಇನ್ನೊಮ್ಮೆ ಕಮಲಕ್ಕೆ ಮತ ನೀಡಿದರೆ, ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ ಎಂದರು.
ಮಡಿಕೇರಿ ಕ್ಷೇತ್ರದಲ್ಲಿ ಕಮಲ, ಕಾಂಗ್ರೆಸ್ಸಿಗರೆ ಹೆಚ್ಚಿದ್ದಾರೆ. ರಾತ್ರಿ ಬಿಜೆಪಿ, ಹಗಲು ಕಾಂಗ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಕಾಂಗ್ರೆಸ್ ನಾಯಕರೇ ಸೋಲಿಸಲಿದ್ದಾರೆ. ಇಂತಹ ಪಕ್ಷಕ್ಕೆ ಮತ ಚಲಾಯಿಸಿದರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದರು.
ಹಲವು ವರ್ಷಗಳಿಂದ ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ರೈತಪರ ಹೋರಾಟ ಮತ್ತು ಪ್ರತಿಭಟನೆಗಳನ್ನು ಜೆಡಿಎಸ್ ಮೂಲಕ ಮಾಡಲಾಗಿದೆ. ನಮ್ಮ ಹೋರಾಟದ ಫಲವಾಗಿ ಅನೇಕ ರೈತರಿಗೆ ಹಕ್ಕುಪತ್ರಗಳು ಸಿಕ್ಕಿವೆ. 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಮನೆಗಳನ್ನು ಕಟ್ಟಿ ಕೊಟ್ಟಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ. ನಂತರ ಬಂದ ಬಿಜೆಪಿ ಸರ್ಕಾರ ಮನೆಗಳನ್ನು ಕಲ್ಪಿಸಲು ವಿಳಂಬ ನೀತಿ ಅನುಸರಿಸಿತು. ಈ ಸಂದರ್ಭದಲ್ಲ್ಲಿ ಜೆಡಿಎಸ್ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಮನೆಗಳ ವಿತರಣೆ ಮಾಡಲಾಯಿತು ಎಂದರು.
ಸೋಮವಾರಪೇಟೆ ತಾಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಗ್ರಾಮೀಣ ಭಾಗಕ್ಕೆ ಅನುದಾನ ಕೊಡದೆ ಸರ್ಕಾರ ಅನ್ಯಾಯ ಮಾಡಿದೆ. ಇಲ್ಲಿಯ ವರೆಗೆ ಕೊಡಗು ಬಿಜೆಪಿ ಭದ್ರಕೋಟೆಯಾಗಿದ್ದರೂ, ಸೂಕ್ತ ಅನುದಾನ ನೀಡದೆ ಮಲತಾಯಿ ಧೋರಣೆ ಮಾಡಲಾಗಿದೆ. 5 ಬಾರಿ ಶಾಸಕರಾದವರಿಗೂ ಮಂತ್ರಿ ಸ್ಥಾನ ನೀಡದೆ ವಂಚಿಸಲಾಗಿದೆ. ಇವೆಲ್ಲ ಕಾರಣದಿಂದ ಈ ಬಾರಿ ಜೆಡಿಎಸ್‌ಗೆ ಜನರು ಮತ ಹಾಕಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಪಕ್ಷದ ನಗರ ಘಟಕ ಅಧ್ಯಕ್ಷ ಜಯನಂದ, ಪಕ್ಷದ ಪ್ರಮುಖರಾದ ಎಚ್.ಡಿ.ಪ್ರವೀಣ್, ಸಿ.ಕೆ.ರಾಘವೇಂದ್ರ, ವಿಜು ಇದ್ದರು.