ಜೆಡಿಎಸ್​ಗೆ ಪಂಚಕ್ಷೇತ್ರ ಗೆಲ್ಲುವ ವಿಶ್ವಾಸ; ಜಿಲ್ಲಾ ಕಾಂಗ್ರೆಸ್​ನಲ್ಲಿ ನಿಂತಿಲ್ಲ ಬಣ ರಾಜಕೀಯ; ಟೇಕ್ಆಫ್​ ಆಗದ ಬಿಜೆಪಿ

ಕೋಲಾರ ತಾಲೂಕಿನಲ್ಲಿ ಮಾಜಿ ಸಿಎಂ  ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಸಾಗಿದಾಗ ಸೇರಿದ್ದ ಜನಸ್ತೋಮ.
ಕೋಲಾರ ತಾಲೂಕಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಸಾಗಿದಾಗ ಸೇರಿದ್ದ ಜನಸ್ತೋಮ.
Published on

ಕೋಲಾರ: ಪಂಚರತ್ನ ರಥಯಾತ್ರೆ ಜಿಲ್ಲೆಯಲ್ಲಿ ಪಂಚಕ್ಷೇತ್ರ ವಶಕ್ಕೆ ಮುನ್ನುಡಿ ಬರೆದಿದ್ದು, ಕಾರ್ಯಕರ್ತರಲ್ಲಿ ರಣೋತ್ಸಾಹ ಕಂಡು ಬರುತ್ತಿದೆ. ಆದರೆ "ಕೈ', ಕಮಲ ಪಾಳಯದಲ್ಲಿ ಬಣ ಬಡಿದಾಟ, ಪರಸ್ಪರ ಕಾಲೆಳೆಯುವುದು ಮುಂದುವರಿದಿದ್ದು, ಕಾರ್ಯಕರ್ತರಲ್ಲಿ ನಿರುತ್ಸಾಹ ಮನೆ ಮಾಡಿದೆ. ರಾಷ್ಟ್ರೀಯ ಪಕ್ಷಗಳು ಜನರನ್ನು ಸೆಳೆಯಬಲ್ಲ ನಾಯಕತ್ವದ ಕೊರತೆ ಎದುರಿಸುತ್ತಿರುವುದು ಆ ಪಕ್ಷಗಳಿಗೆ ಮುಳುವಾಗುವ ಸಾಧ್ಯತೆ ದಟ್ಟವಾಗಿದೆ.


ಸಿದ್ದರಾಮಯ್ಯ ಬಂದು ಹೋದರೂ ಕೈಪಾಳಯದಲ್ಲಿ ಕೆ.ಎಚ್​.ಮುನಿಯಪ್ಪ ಮತ್ತು ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಬಣಗಳು ಒಗ್ಗೂಡಿಲ್ಲ. ಸಿದ್ದರಾಮಯ್ಯ ಬಂದಾಗಲೂ ಮುನಿಯಪ್ಪ ಬಣದವರು ಅಂಬೇಡ್ಕರ್​ ಪ್ರತಿಮೆ ಬಳಿ ಸೇರುವ ಮೂಲಕ ಬಿಕ್ಕಟ್ಟು ಇದೆ ಎಂಬುದನ್ನು ಜಗಜ್ಜಾಹಿರುಗೊಳಿಸಿದ್ದರು. ಸಿದ್ದರಾಮಯ್ಯ ಆಗಮನದಿಂದ ಅಹಿಂದ ಮತಗಳು ಧ್ರುವಿಕರಣಗೊಳ್ಳುತ್ತವೆ ಎಂದೇ ಭಾವಿಸಲಾಗಿತ್ತು. ಆದರೆ ಮುಳಬಾಗಿಲಿನಿಂದ ಪಂಚರತ್ನ ಯಾತ್ರೆ ಪ್ರಾರಂಭಿಸಿದ ಎಚ್​.ಡಿ.ಕುಮಾರಸ್ವಾಮಿಗೆ ಮಧ್ಯರಾತ್ರಿಯಾದರೂ ರಸ್ತೆಗಳಲ್ಲಿ ನಿಂತು ಜನ ಬೆಂಬಲ ವ್ಯಕ್ತಪಡಿಸಿದ್ದು ನೋಡಿದರೆ ಮತ ಧ್ರುವಿಕರಣವು ಜೆಡಿಎಸ್​ ಕಡೆಗೆ ಆದಂತಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.


ಪಂಚರತ್ನದಿಂದ ಕಳೆಗುಂದಿದ ಕಾಂಗ್ರೆಸ್​ ಜೋಶ್​ : ಸಿದ್ದರಾಮಯ್ಯ ಸ್ಪರ್ಧೆ ಅನುಮಾನ ಎಂಬ ಮಾತುಗಳು ಕೇಳಿಬರುತ್ತಿದ್ದಂತೆ, ಕಾಂಗ್ರೆಸ್​ನಲ್ಲಿ ಮತ್ತೆ ನಿರುತ್ಸಾಹ ಕಂಡುಬರುತ್ತಿದೆ. ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ಕೈ ಶಾಸಕರು ಜನ ಸೇರಿಸಿ ಬಲಪ್ರದರ್ಶಿಸಿದ್ದರು. ಆಗ ಕಾರ್ಯಕರ್ತರಲ್ಲಿದ್ದ ಜೋಶ್​ ಪಂಚರತ್ನ ಯಾತ್ರೆ ಅಬ್ಬರಕ್ಕೆ ಮಂಜಿನಂತೆ ಕರಗಿದೆ.


ಜಿಲ್ಲೆಯಲ್ಲಿ ಕಾಂಗ್ರೆಸ್​ ಸಂಘಟನೆಯಿಲ್ಲದೆ ಸೊರಗಿದೆ. ಕಳೆದ ಏಪ್ರಿಲ್​ನಲ್ಲಿ ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಇಲ್ಲಿಯ ತನಕ ಹೊಸ ಅಧ್ಯಕ್ಷರ ನೇಮಕವಾಗಿಲ್ಲ. ಕೋಲಾರ ಕ್ಷೇತ್ರದಲ್ಲಿ ಬ್ಲಾಕ್​ ಸಮಿತಿ ಅಧ್ಯಕ್ಷರು ಮುನಿಯಪ್ಪ ಬಣದವರಾಗಿದ್ದು, ಅವರು ನಡೆಸುವ ಕಾರ್ಯಕ್ರಮಗಳಿಗೆ ರಮೇಶ್​ ಕುಮಾರ್​ ಬಣದವರು ಹತ್ತಿರಕ್ಕೂ ಸುಳಿಯುವುದಿಲ್ಲ. ಶ್ರೀನಿವಾಸಪುರದಲ್ಲಿ ಶಾಸಕ ರಮೇಶ್​ ಕುಮಾರ್​, ಬಂಗಾರಪೇಟೆಯಲ್ಲಿ ಎಸ್​.ಎನ್​.ನಾರಾಯಣಸ್ವಾಮಿ, ಮಾಲೂರಿನಲ್ಲಿ ಕೆ.ವೈ. ನಂಜೇಗೌಡ, ಕೆಜಿಎಫ್​ನಲ್ಲಿ ರೂಪಕಲಾ ಅವರೇ ಪಕ್ಷ ಮುನ್ನಡೆಸುತ್ತಿದ್ದು, ಈ ಶಾಸಕರ ಕೈಹಿಡಿದು ಮುನ್ನಡೆಸಲು ಜಿಲ್ಲಾಮಟ್ಟದಲ್ಲಿ ಸಾರಥಿ ಕೊರತೆ ಹೆಚ್ಚಾಗಿ ಕಾಡುತ್ತಿದೆ.


ಬಿಜೆಪಿಯಲ್ಲೂ ಬಣಬಡಿದಾಟ: ಕೋಲಾರ ಕ್ಷೇತ್ರದಲ್ಲಿ ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​ ಹೊರತುಪಡಿಸಿದರೆ ಇತರ ಕ್ಷೇತ್ರಗಳಲ್ಲಿ ಬಿಜೆಪಿ ಆಕಾಂಕ್ಷಿಗಳು ಸಂಚರಿಸುತ್ತಿಲ್ಲ. ಗೆಲ್ಲುವ ಸಾಧ್ಯತೆ ಹೆಚ್ಚಾಗಿರುವ ಮಾಲೂರು, ಬಂಗಾರಪೇಟೆ, ಕೆಜಿಎಫ್​ನಲ್ಲಿ ಟಿಕೆಟ್​ ಘೋಷಣೆಯಾಗದ ಕಾರಣ ಅಭ್ಯರ್ಥಿಗಳು ಜನರ ಬಳಿಗೆ ತೆರಳುತ್ತಿಲ್ಲ. ಮಾಲೂರಿನಲ್ಲಿ ಇತ್ತೀಚೆಗೆ ಪಕ್ಷ ಸೇರ್ಪಡೆಗೊಂಡಿರುವ ಮಾಜಿ ಶಾಸಕ ಮಂಜುನಾಥಗೌಡ ಮತ್ತು ನಾಲ್ಕೈದು ವರ್ಷದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಹೂಡಿ ವಿಜಯಕುಮಾರ್​ ನಡುವೆ ಟಿಕೆಟ್​ ಫೈಟ್​ ತಾರಕಕ್ಕೇರಿದೆ.

ಮಂಜುನಾಥಗೌಡರಿಗೆ ಟಿಕೆಟ್​ ನೀಡಿದರೆ ಹೂಡಿ ವಿಜಯಕುಮಾರ್​ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನಲಾಗುತ್ತಿದೆ. ಒಂದು ವೇಳೆ ಹೂಡಿ ವಿಜಯಕುಮಾರ್​ಗೆ ಟಿಕೆಟ್​ ನೀಡಿದರೆ ಮಂಜುನಾಥಗೌಡರ ಬಣ ಜೆಡಿಎಸ್​ ಅಭ್ಯರ್ಥಿ ಜಿ.ಇ ರಾಮೇಗೌಡರಿಗೆ ಮತ ಹಾಕಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಬಂಗಾರಪೇಟೆಯಲ್ಲಿ ಮಾಜಿ ಶಾಸಕ ಎಂ. ನಾರಾಯಣಸ್ವಾಮಿಗೆ ಟಿಕೆಟ್​ ನೀಡಿದರೆ ಕಾಂಗ್ರೆಸ್​ನ ಎಸ್​.ಎನ್​.ನಾರಾಯಣಸ್ವಾಮಿ ಅನಾಯಾಸವಾಗಿ ಗೆಲ್ಲಬಹುದು. ಇಲ್ಲಿ ಮ್ಯಾಚ್​ಫಿಕ್ಸಿಂಗ್​ ಮಾಡಿಕೊಂಡು ಬಿಜೆಪಿ ಅಭ್ಯರ್ಥಿ ಹಾಕಿದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.


ಸಂಸದ ಎಸ್​.ಮುನಿಸ್ವಾಮಿ ಮತ್ತು ಉಸ್ತುವಾರಿ ಸಚಿವ ಮುನಿರತ್ನ ನಡುವೆ ಭಿನ್ನಾಭಿಪ್ರಾಯವಿದ್ದು, ಅಭಿವೃದ್ಧಿಗೆ ಮುನ್ನುಡಿ ಬರೆದು ಪಕ್ಷಕ್ಕೆ ಬಲ ತುಂಬುವ ಕೆಲಸವನ್ನು ಇಬ್ಬರೂ ಮಾಡುತ್ತಿಲ್ಲ. ಇವರಿಬ್ಬರೂ ಬೇರೆ ಪಕ್ಷದ ಮೂಲದವರಾಗಿದ್ದು ಬಿಜೆಪಿ ವಾತಾವರಣಕ್ಕೆ ಸಂಪೂರ್ಣ ಹೊಂದಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕಾರ್ಯಕರ್ತರಿಂದ ಕೇಳಿ ಬರುತ್ತಿವೆ.


ಕಾಂಗ್ರೆಸ್​, ಬಿಜೆಪಿಗೆ ಪಂಚರತ್ನದ ಪಜೀತಿ!
ಪಂಚರತ್ನ ಯಾತ್ರೆ ಸಂದರ್ಭ ಸ್ವಪ್ರೇರಣೆಯಿಂದ ಜನಸಾಗರ ಹರಿದುಬಂದಿದ್ದು ನೋಡಿ ಕಾಂಗ್ರೆಸ್​, ಬಿಜೆಪಿ ನಾಯಕರಲ್ಲೂ ನಡುಕ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್​.ಮುನಿಯಪ್ಪ ಸೋಲಿಗೆ ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಮತ್ತು ಶಾಸಕರು ಕಾರಣರಾಗಿದ್ದು, ಈ ಬಾರಿ ಇವರೆಲ್ಲರ ಸೋಲಿಗೆ ಕೆ.ಎಚ್​.ಮುನಿಯಪ್ಪ ಮತ್ತು ತಂಡ ಯತ್ನಿಸುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್​ ಶಾಸಕರ ಬಲ 5ಕ್ಕೇರಿದೆ. ಇವರೆಲ್ಲರ ಸೋಲಿಗೆ ಕೆಲವು ಬಿಜೆಪಿ ನಾಯಕರು ಟೊಂಕ ಕಟ್ಟಿ ನಿಂತಿದ್ದು, ಪರಿಸ್ಥಿತಿ ನೋಡಿ ಕೆಲವೆಡೆ ಜೆಡಿಎಸ್​ ಜತೆ ಒಳ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಮತ ಧ್ರುವಿಕರಣದ ಎಫೆಕ್ಟ್​
ಕುಮಾರಸ್ವಾಮಿ ಯಾತ್ರೆ ಜೆಡಿಎಸ್​ನ ಮತಧ್ರುವಿಕರಣಕ್ಕೆ ನಾಂದಿ ಹಾಡಿದೆ. ಬಹುಸಂಖ್ಯಾತ ಒಕ್ಕಲಿಗರಲ್ಲದೆ, ಹೆಚ್ಚಿನ ಮಹಿಳೆಯರು, ಇತರ ವರ್ಗದವರೂ ತಡರಾತ್ರಿ ಒಂದೂವರೆ ತನಕ ದಳಪತಿ ನೋಡಲು ಕಾದಿದ್ದರು. ಕೆಜಿಎಫ್​ ಹೊರತುಪಡಿಸಿ ಯಾತ್ರೆ ನಡೆದ ಐದೂ ಕ್ಷೇತ್ರಗಳಲ್ಲಿ ಜನ ಸೇರಿದ್ದು, ಎಲ್ಲವೂ ಮತಗಳಾಗಿ ಪರಿವರ್ತನೆಯಾದರೆ ಜೆಡಿಎಸ್​ ಜಯಭೇರಿ ಬಾರಿಸುವುದರಲ್ಲಿ ಅನುಮಾನವೇ ಇಲ್ಲ ಎಂಬ ಮಾತುಗಳೂ ಇವೆ. ಇನ್ನೊಂದೆಡೆ ಅಭ್ಯರ್ಥಿಗಳು ಈ ಕಾವನ್ನು ಚುನಾವಣೆ ತನಕ ಉಳಿಸಿಕೊಳ್ಳುವರೇ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net