ಜೆಡಿಎಸ್ ಅಧಿಕಾರಕ್ಕೆ ತನ್ನಿ

16HDK4
Published on

ಎಚ್.ಡಿ.ಕೋಟೆ: ನಾಡಿನ ಪ್ರತಿಯೊಂದು ಕುಟುಂಬವೂ ನೆಮ್ಮದಿ, ಸಂತೃಪ್ತಿಯ ಬದುಕು ಕಟ್ಟಿಕೊಳ್ಳಲು ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಪಂಚರತ್ನ ಯಾತ್ರೆ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮಹಿಳೆಯರ ಸಂಕಷ್ಟ ಪರಿಹಾರ, ರೈತರಿಗೆ ನೆಮ್ಮದಿಯ ಬದುಕು, ಯುವಜನರಿಗೆ ಉದ್ಯೋಗ ಕಲ್ಪಿಸುವುದು ಜೆಡಿಎಸ್ ಸರ್ಕಾರದ ಗುರಿಯಾಗಿದೆ. ಕಳೆದ ನಾಲ್ಕೂವರೆ ತಿಂಗಳಿಂದ ಏಕಾಂಗಿಯಾಗಿ ಇಡೀ ರಾಜ್ಯವನ್ನು ದಿನದ 18 ಗಂಟೆಗಳ ಕಾಲ ನಿದ್ದೆ ಮಾಡದೆ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ರಾಜ್ಯದ ಜನರು ಪಕ್ಷ ಅಧಿಕಾರಕ್ಕೆ ತರುವ ವಿಶ್ವಾಸ ವ್ಯಕ್ತಪಡಿಸುತ್ತಿರುವುದನ್ನು ಪ್ರವಾಸ ಸಂದರ್ಭದಲ್ಲಿ ಕಂಡಿದ್ದೇನೆ ಎಂದು ತಿಳಿಸಿದರು.
ದಿನನಿತ್ಯ ಸಾವಿರಕ್ಕೂ ಹೆಚ್ಚು ಜನರು ರಾಜ್ಯದ ಮೂಲೆ ಮೂಲೆಗಳಿಂದ ನೆರವು ಕೋರಲು ಬರುತ್ತಾರೆ. ಅವರೆಲ್ಲರಿಗೂ ಸರ್ಕಾರದ ಯೋಜನೆಗಳ ಮೂಲಕ ಪರಿಹಾರ ನೀಡಲು ಪಂಚರತ್ನ ಯೋಜನೆಗಳನ್ನು ರೂಪಿಸಲಾಗಿದೆ. ಮುಂಗಾರಿನ ಸಂದರ್ಭದಲ್ಲಿ ಬಿತ್ತನೆ ಬೀಜಕ್ಕಾಗಿ ರೈತರಿಗೆ ಎಕರೆಗೆ 10 ಸಾವಿರ ರೂ., ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಸಿಲಿಂಡರ್ ಉಚಿತ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ, ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಮಾಸಿಕ 2.5 ಸಾವಿರ ರೂ., ವೃದ್ಧರಿಗೆ 5 ಸಾವಿರ ರೂ., ಪದವಿ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕಲ್ ಬೈಕ್, ಅಪೌಷ್ಟಿಕತೆ ನಿವಾರಣೆಗಾಗಿ ಬಾಣಂತಿಯರಿಗೆ ವಾರ್ಷಿಕ 36 ಸಾವಿರ ರೂ., ಮಹಿಳಾ ಸ್ವಸಹಾಯ ಸಂಘದ ಸಾಲಮನ್ನಾ, ಮನೆ ಇಲ್ಲದವರಿಗೆ ನಿವೇಶನ ಕಲ್ಪಿಸಿ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net