

ನಂಜನಗೂಡು: ಬಾಳೆ ಬೆಳೆಗೆ ಸಂಬಂಧಿತ ಗಣನೀಯ ಸಾಧನೆಗೆ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿರುವ ಐಸಿಎಆರ್ ಬಾಳೆ ಸಂಶೋಧನಾ ಕೇಂದ್ರ ನೀಡುವ ರಾಷ್ಟ್ರಮಟ್ಟದ ಅತ್ಯುತ್ತಮ ಕೆವಿಕೆ(ಕೃಷಿ ವಿಜ್ಞಾನ್ ಕೇಂದ್ರ) ಪ್ರಶಸ್ತಿಗೆ ತಾಲೂಕಿನ ಸುತ್ತೂರು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಭಾಜನವಾಗಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರ ಮಠ ತಿಳಿಸಿದರು.
ಮೈಸೂರು ಜಿಲ್ಲೆಯಲ್ಲಿ ಬಾಳೆ ಪ್ರಮುಖ ತೋಟಗಾರಿಕೆ ಬೆಳೆೆ. ವಿಶೇಷವಾಗಿ ನಂಜನಗೂಡು ರಸಬಾಳೆ ಜಿಲ್ಲೆಯ ಪಾರಂಪರಿಕ ತಳಿಯಾಗಿದೆ. ನಂಜನಗೂಡು ರಸಬಾಳೆಗೆ ಬರುವ ಪನಾಮ ರೋಗದ ತೀವ್ರತೆ ಕಡಿಮೆ ಮಾಡಿ ಅಧಿಕ ಇಳುವರಿ ಪಡೆಯುವಲ್ಲಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳು ಶ್ರಮ ವಹಿಸಿದ್ದಾರೆ. ಬಾಳೆ ಬೆಳೆಗೆ ಸಂಬಂಧಿಸಿದಂತೆ ಕೆವಿಕೆ ವತಿಯಿಂದ ಕೈಗೊಂಡಿರುವ ತಂತ್ರಜ್ಞಾನ, ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಬಾಳೆ ಬೆಳೆಯಲ್ಲಿ ಸರಾಸರಿ ಶೇ.15 ರಿಂದ 20ರಷ್ಟು ಉತ್ಪಾದನೆ ಹೆಚ್ಚಿಸುವಲ್ಲಿ ಕೆವಿಕೆ ಯಶಸ್ವಿಯಾಗಿದೆ. ಇದನ್ನು ಪರಿಗಣಿಸಿ ಐಸಿಎಆರ್ ಬಾಳೆ ಸಂಶೋಧನಾ ಕೇಂದ್ರ ನೀಡುವ ರಾಷ್ಟ್ರಮಟ್ಟದ ಕೆವಿಕೆ ಪ್ರಶಸ್ತಿಯನ್ನು ಸುತ್ತೂರು ಜೆಎಸ್ಎಸ್ ಕೆವಿಕೆಗೆ ನೀಡಿ ಗೌರವಿಸಿದೆ ಎಂದು ತಾಲೂಕಿನ ಸುತ್ತೂರು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಆ.21ರಂದು ತಿರುಚಾನಹಳ್ಳಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೆವಿಕೆ ಪ್ರಭಾರ ಮುಖ್ಯಸ್ಥೆ ಎಚ್.ವಿ.ದಿವ್ಯಾ, ವಿಜ್ಞಾನಿಗಳಾದ ಡಾ.ಜಿ.ಎಂ.ವಿನಯ್, ಜೆ.ಜಿ.ರಾಜಣ್ಣ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇನ್ನು ಕೆವಿಕೆ ವತಿಯಿಂದ ಬಾಳೆ ಬೆಳೆಯ ಮೌಲ್ಯವರ್ಧನೆ ಬಗ್ಗೆ ಆಸಕ್ತರಿಗೆ ತರಬೇತಿ ಕೊಡುವುದರ ಜತೆಗೆ ಸ್ವ ಉದ್ಯಮವನ್ನು ಉತ್ತೇಜಿಸುತ್ತಿರುವ ಫಲವಾಗಿ ಕೆವಿಕೆ ನೆರವಿನಿಂದ ಉತ್ತಮ ಬಾಳೆ ಫಸಲು ಬೆಳೆದಿರುವ ನವೀನ್ಕುಮಾರ್ ಅವರಿಗೆ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವತಿಯಿಂದ ಅತ್ಯುತ್ತಮ ಬಾಳೆ ಉದ್ಯಮಿ ಪ್ರಶಸ್ತಿ ಲಭಿಸಿರುವುದು ಮತ್ತೊಂದು ಹೆಮ್ಮೆಯ ಸಂಗತಿ ಎಂದರು.
ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಮುಖ್ಯಸ್ಥೆ ಎಚ್.ವಿ.ದಿವ್ಯಾ ಮಾತನಾಡಿ, ನಂಜನಗೂಡು ರಸಬಾಳೆಗೆ ಪನಾಮ ರೋಗ ನಿವಾರಣೆ ಕುರಿತು ಕೆವಿಕೆ ವತಿಯಿಂದ ಮೈಸೂರಿನಲ್ಲಿ ರಾಷ್ಟ್ರ ಮಟ್ಟದ ಚರ್ಚೆ ಹಮ್ಮಿಕೊಳ್ಳಲಾಗಿದೆ. ರಸಬಾಳೆ ತಳಿಯ ಸಂರಕ್ಷಣೆ, ನಿರ್ವಹಣೆ ಕುರಿತು ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ಜತೆಗೆ ಕ್ಷೇತ್ರ ಪ್ರಯೋಗ ಮಾಡಲಾಗಿದೆ. ಅದರ ತಳಿಯ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವ ಎಲ್ಲ ಕಾರ್ಯಕ್ರಮಗಳನ್ನು ಗುರುತಿಸಿ ಈ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ನಿರ್ದೇಶಕ ಎನ್.ಎಂ.ಶಿವಶಂಕರಪ್ಪ, ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಎಲ್.ರೇವಣ್ಣಸ್ವಾಮಿ, ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಇದ್ದರು.