

ಶಿವಮೊಗ್ಗ: ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್, ಗುರುಬಸವ ಅಧ್ಯಯನ ಪೀಠದ ಆಶ್ರಯದಲ್ಲಿ ಮನೆ ಮನೆಗಳಲ್ಲಿ ಶ್ರಾವಣ ಚಿಂತನಾ ಕಾರ್ಯಕ್ರಮದ ಅಂಗವಾಗಿ ‘ಸಮಾಜಮುಖಿ ಸೇವೆಯ ಮಠಾಧೀಶರರು’ ಮೌಲಿಕ ಚಿಂತನೆ ಉಪನ್ಯಾಸ ಮಾಲಿಕೆಯನ್ನು ಜು.29ರಿಂದ ಆ.23ರವರೆಗೆ ಆಯೋಜಿಸಲಾಗಿದೆ ಎಂದು ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ರೇಣುಕಾರಾಧ್ಯ ಹೇಳಿದರು.
ಬೆಕ್ಕಿನಕಲ್ಮಠ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಿಂತನಾ ಸಭೆ ನಡೆಯಲಿದ್ದು, ವಿವಿಧ ಸ್ಥಳಗಳಲ್ಲಿ ವಚನ ಸಂಗೀತ, ಅಲ್ಲಮ ರಂಗವಚನ ರೂಪಕ, ಉಪನ್ಯಾಸ, ಸಂವಾದ, ಆಶೀರ್ವಚನ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜು.29ರ ಸಂಜೆ 6.30ಕ್ಕೆ ಬೆಕ್ಕಿನಕಲ್ಮಠದಲ್ಲಿ ಶ್ರಾವಣ ಚಿಂತನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಶಾಸಕ ಎಸ್.ಎನ್.ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಉಪಸ್ಥಿತರಿರುವರು. ಬಾರಂದೂರು ಪ್ರಕಾಶ್ ಉಪನ್ಯಾಸ ನೀಡುವರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರಿ ಅವರಿಗೆ ಗುರುರಕ್ಷೆ ನೀಡಲಾಗುವುದು. ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ.ಶಶಿಧರ್ ಅಧ್ಯಕ್ಷತೆ ವಹಿಸುವರು ಎಂದರು.
ಜು.30ರಿಂದ ಆ.22ರವರೆಗೆ ನಗರದ ವಿವಿಧ ಬಡಾವಣೆಗಳ ಸೇವಾಕರ್ತರ ಮನೆಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ.23ರಂದು ವಿನಾಯಕ ನಗರದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಸಂಜೆ 6ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಹರ್ಷ ಕಾಮತ್, ಪ್ರಕಾಶ್ ಬಾರಂದೂರು, ಅನಿತಾ ರವಿಶಂಕರ್, ಬಳ್ಳೇಕೆರೆ ಸಂತೋಷ್, ಎಸ್.ಪಿ.ದಿನೇಶ್, ಮೋಹನ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.