ಜೀವನದಿಗಳ ಅಸ್ತಿತ್ವಕ್ಕೇ ಧಕ್ಕೆ

9 tth 01 tunga abiyana
ಮುಡುಬಾದಲ್ಲಿ ನಡೆದ ನಿರ್ಮಲ ತುಂಗಭದ್ರಾ ಪಾದಯಾತ್ರೆಯಲ್ಲಿ ಡಾ. ಎಂ.ಬಿ.ಕುಮಾರಸ್ವಾಮಿ, ಅಶೋಕಮೂರ್ತಿ, ಸತೀಶ್, ಸುಮಾವತಿ ಇತರರಿದ್ದರು.
Published on

ತೀರ್ಥಹಳ್ಳಿ: ಪರಿಸರ ಹಾನಿಯಿಂದಾಗಿ ತುಂಗಭದ್ರಾ ನದಿ ಕಲುಷಿತವಾಗಿರುವುದು ಮಾತ್ರವಲ್ಲದೆ ಎರಡೂ ಜೀವನದಿಗಳ ಅಸ್ತಿತ್ವಕ್ಕೇ ಧಕ್ಕೆ ಉಂಟಾಗುವ ಆತಂಕ ಎದುರಾಗಿದೆ ಎಂದು ನಿರ್ಮಲ ತುಂಗಭದ್ರಾ ಪಾದಯಾತ್ರೆಯ ನೇತೃತ್ವ ವಹಿಸಿರುವ ಪರಿಸರ ತಜ್ಞ ಡಾ. ಎಂ.ಬಿ.ಕುಮಾರಸ್ವಾಮಿ ತಿಳಿಸಿದರು.

ಶನಿವಾರ ಸಂಜೆ ತಾಲೂಕಿನ ಮುಡುಬಾ ವೃತ್ತದಲ್ಲಿ ನವದೆಹಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್‌ಯಿಂದ ಹಮ್ಮಿಕೊಂಡಿರುವ ಶೃಂಗೇರಿಯಿಂದ ಕಿಷ್ಕಿಂಧೆವರೆಗಿನ ಪಾದಯಾತ್ರೆಯಲ್ಲಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ನದಿ ನೀರು ಕಲುಷಿತಗೊಳ್ಳದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

ಮದುವೆ ಮತ್ತಿತರ ಸಮಾರಂಭಗಳ ಸಂದರ್ಭಗಳಲ್ಲಿ ಬಳಸುವ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ನದಿ ನೀರಿಗೆ ಸೇರುವುದರಿಂದ ನೀರು ಕಲುಷಿತಗೊಂಡು ಜಲಚರಗಳ ಅವಸಾನವಾಗುವುದರಲ್ಲದೆ ನದಿಯ ಉಳಿವಿಗೆ ಮಾರಕವಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಮಂಡಗದ್ದೆ ಗ್ರಾಪಂ ಅಧ್ಯಕ್ಷೆ ಜ್ಯೋತಿ ಮಾತನಾಡಿ, ಪರಿಶುದ್ಧತೆಗೆ ಮಾದರಿಯಾಗಿದ್ದ ಮಲೆನಾಡಿನ ನದಿಗಳು ಅಭಿವೃದ್ಧಿ ಮತ್ತಿತರ ಕಾರಣಗಳಿಂದ ಕಲುಷಿತಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಅಶೋಕಮೂರ್ತಿ, ಮಂಡಗದ್ದೆ ಗ್ರಾಪಂ ಸದಸ್ಯರಾದ ಸತೀಶ್, ಸುಮಾವತಿ, ಶ್ರೀಪತಿ, ರಾಘವ, ಬಾಲಕೃಷ್ಣ, ಶಾಲೆಯ ಆಡಳಿತ ಮಂಡಳಿಯ ಭಾಸ್ಕರ ಪೌಲ್, ಜೀವನ್, ಮುಖ್ಯ ಶಿಕ್ಷಕ ಅಶೋಕ್ ಇದ್ದರು. ಬೆಜ್ಜವಳ್ಳಿಯಿಂದ ಆಗಮಿಸಿದ ಪಾದಯಾತ್ರೆಯನ್ನು ಮುಡುಬಾ ಚೌಡೇಶ್ವರಿ ದೇವಸ್ಥಾನದಿಂದ ಪೂರ್ಣಕುಂಭ ಸ್ವಾಗತ ನೀಡಿ ಮುಡುಬಾ ವೃತ್ತದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net