ಜೀವನದಲ್ಲಿ ನಾಲ್ಕು ಡಿ ಸೂತ್ರದಿಂದ ಸಾಧನೆ: ಡಾ. ಧನಂಜಯ ಸರ್ಜಿ

4 smg 10b
Published on

ಶಿವಮೊಗ್ಗ: ಜೀವನದಲ್ಲಿ ಡ್ರೀಮ್, ಡೇಟ್, ಡಿಕ್ಲೇರ್ ಮತ್ತು ಡೆಡಿಕೇಶನ್ ಎಂಬ ನಾಲ್ಕು ಡಿ ಸೂತ್ರವನ್ನು ಅಳವಡಿಸಿಕೊಂಡಾಗ ಸಾಧನೆಗೆ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ ಎಂದು ಸರ್ಜಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗದಲ್ಲಿ ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘದಿಂದ ಭಾನುವಾರ ದಿನಪತ್ರಿಕೆ ವಿತರಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ದೊಡ್ಡ ಕನಸು ಕಾಣಬೇಕು. ಕನಸನ್ನು ನನಸು ಮಾಡಿಕೊಳ್ಳುವ ಛಲದಿಂದ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಬೇಕು. ಸಿದ್ಧತೆ ಮತ್ತು ವಿಚಾರಧಾರೆಯಿಂದ ಮುನ್ನೆಡದರೆ ಅಸಾಧ್ಯವೂ ಸಾಧ್ಯವಾಗುತ್ತದೆ ಎಂದರು.

ಪತ್ರಿಕಾ ವಿತರಕರಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಎಂಜಿನಿಯರ್ ಆಗಿ, ವಿಜ್ಞಾನಿಯಾಗಿ, ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದರು. ಅವರಲ್ಲಿದ್ದ ಶ್ರದ್ಧ, ನಂಬಿಕೆ ಮತ್ತು ಛಲವೇ ಅದಕ್ಕೆ ಕಾರಣ. ಮಳೆ, ಗಾಳಿ, ಚಳಿ ಇದ್ಯಾವುದು ಪತ್ರಿಕಾ ವಿತರಕರಿಗೆ ಲೆಕ್ಕಕ್ಕಿಲ್ಲ. ಸುರಿಯುವ ಮಳೆಯಲ್ಲೂ, ಕೊರೆವ ಚಳಿಯಲ್ಲೂ ಮನೆ, ಮನೆಗೆ ಪತ್ರಿಕೆ ಹಂಚುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದರು.

ಪತ್ರಿಕಾ ವಿತರಕರಿಗೆ ಆರೋಗ್ಯ ಅತಿಮುಖ್ಯ. ಸಂಘಟನೆಯಲ್ಲಿ ಒಗ್ಗಟ್ಟಿದ್ದರೆ, ಸವಲತ್ತುಗಳನ್ನು ನೀವೇ ಪಡೆದುಕೊಳ್ಳಬಹುದು. ನಿಮ್ಮ ಸಂಘವನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಇಎಸ್‌ಐ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ಎಂಎಲ್‌ಸಿ ಎಸ್.ರುದ್ರೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಗೋಪಾಲ್ ಎಸ್.ಯಡಗೆರೆ, ಪತ್ರಕರ್ತ ಚಂದ್ರಹಾಸ ಹಿರೇಮಳಲಿ, ಪತ್ರಕರ್ತ ಸೂರ್ಯನಾರಾಯಣ ಮಾತನಾಡಿದರು. ಸಂಜಯ್, ಪ್ರಕಾಶ್, ಸತ್ಯನಾರಾಯಣ್, ಗಿಡ್ಡೇಶ್, ಕೃಷ್ಣಮೂರ್ತಿ, ರಮೇಶ್ ಅವರನ್ನು ಸನ್ಮಾನಿಲಾಯಿತು. ದಿನಪತ್ರಿಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಪ್ರಸರಣ ವಿಭಾಗದ ಪ್ರಮುಖರಾದ ಕೆ.ಎನ್.ಸತೀಶ್, ಸಂಘದ ಗೌರವಾಧ್ಯಕ್ಷ ಗಣೇಶ್ ಭಟ್, ಯೋಗೇಶ್ ಸೇರಿದಂತೆ ಪ್ರಮುಖರು ಹಾಗೂ ದಿನಪತ್ರಿಕೆ ವಿತರಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net