ಜೀವ ಭಯದಲ್ಲಿ ಗುಡ್ಡೆತೋಟದ ನಿವಾಸಿಗಳು

10jyp3 gudethota
ಮೇಗುಂದಾ ಹೋಬಳಿ ಗುಡ್ಡೆತೋಟದ ಭೂಕುಸಿತ ಸಂತ್ರಸ್ತ ಕುಟುಂಬವೊಂದು ಗ್ರಾಪಂ ಕಟ್ಟಡದಲ್ಲಿ ಆಶ್ರಯ ಪಡೆದಿರುವುದು.
Published on

ಜಯಪುರ: ಮೇಗುಂದಾ ಹೋಬಳಿ ವ್ಯಾಪ್ತಿಯ ಗುಡ್ಡೆತೋಟದ 17 ಮನೆಗಳ ಮುಂಭಾಗ 7 ವರ್ಷಗಳಿಂದ ಭೂ ಕುಸಿತವಾಗುತ್ತಿದ್ದು ಈ ಕುಟುಂಬಗಳ 70ಕ್ಕೂ ಹೆಚ್ಚು ಜನ ಜೀವ ಭಯದಲ್ಲಿಯೇ ದಿನ ಕಳೆಯುತ್ತಿದ್ದಾರೆ.

ಇಲ್ಲಿನ ಮನೆಗಳು ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯಬಹುದಾದ ಸ್ಥಿತಿಯಲ್ಲಿದ್ದರೂ ಸರ್ಕಾರ ಮನೆಗಳ ಸ್ಥಳಾಂತರಕ್ಕೆ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಕುಂಟು ನೆಪ ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳ ಈ ನಡೆ ಬಡವರ ಜೀವಗಳಿಗೆ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ಮೂಡಿಸುತ್ತಿದೆ.

ಗುಡ್ಡೆತೋಟ ಗ್ರಾಪಂ ಮೇಲಿನ ಸೈಟಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿಕಾರ್ಮಿಕ 17 ಕುಟುಂಬಗಳ ಮನೆಗಳ ಮುಂದಿನ ಮಣ್ಣು 2017ರಲ್ಲಿ ಮೊದಲ ಬಾರಿಗೆ ಕುಸಿದಿತ್ತು. ನಂತರ ಪ್ರತಿವರ್ಷ ಮಳೆಗಾಲದಲ್ಲಿ ಸ್ವಲ್ಪ, ಸ್ವಲ್ಪ ಭೂ ಕುಸಿತವಾಗಿ ಈಗ ಮನೆಗಳು ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯುವ ಹಂತ ತಲುಪಿವೆ.

ಏಳು ವರ್ಷಗಳಿಂದ ಭೂಕುಸಿತವಾದ ಸಂದರ್ಭದಲ್ಲಿ ಇಲ್ಲಿಗೆ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ, ಚುನಾಯಿತ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರಾದರೂ ಇದುವರೆಗೆ ಇಲ್ಲಿನ ನಿವಾಸಿಗಳ ಸ್ಥಳಾಂತರವಾಗಿಲ್ಲ. ಈ 17 ಕುಟುಂಬಗಳಲ್ಲಿ ಮೂರು ಕುಟುಂಬಗಳು ಗ್ರಾಪಂ ಕಟ್ಟಡದಲ್ಲಿ ವಾಸ ಮಾಡುತ್ತಿದ್ದು, ಒಂದು ಕುಟುಂಬ ಜೀವ ಭಯಕ್ಕೆ ಮನೆಯನ್ನೇ ತೊರೆದು ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದೆ. ಇನ್ನುಳಿದ ಕುಟುಂಬಗಳ ಜನ ಮನೆಗಳಲ್ಲಿಯೇ ವಾಸ ಮಾಡುತ್ತಿದ್ದಾರೆ. ಕೂಲಿ ಮಾಡಿ ಜೀವನ ನಡೆಸುತ್ತಿರುವ ಇಲ್ಲಿನ ನಿವಾಸಿಗಳು, ಸಂಪಾದನೆಯಲ್ಲಿ ಸಂಸಾರ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಇಲ್ಲಿನ ಮನೆ ಬಿಟ್ಟು ಬಾಡಿಗೆ ಮನೆಗೆ ತೆರಳಿದರೆ ಬಾಡಿಗೆ ಹಣ ಭರಿಸಿ ಸಂಸಾರ ನಿರ್ವಹಣೆ ಮಾಡುವುದು ಕಷ್ಟವೆಂದು ಭೂ ಕುಸಿತವಾಗಬಹುದಾದ ಇಲ್ಲಿನ ಮನೆಗಳಲ್ಲಿಯೇ ಆತಂಕದಲ್ಲೇ ವಾಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net