ಜೀತಗಾರಿಕೆ ಪ್ರಕರಣ ಕಂಡಲ್ಲಿ ನಿರ್ದಾಕ್ಷಿಣ್ಯ ಕ್ರಮ

HUN-JULY-14-1{ BONDED LABOURER MEETING}
Published on

ಹುಣಸೂರು: ತಾಲೂಕಿನಲ್ಲಿ ಜೀತಗಾರಿಕೆಯ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಎಚ್ಚರಿಕೆ ನೀಡಿದರು.


ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಉಪವಿಭಾಗ ಮಟ್ಟದ ಜೀತ ನಿರ್ಮೂಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಜೀತಗಾರಿಕೆ ಪ್ರಕರಣಗಳು ಯಾರಿಗೇ ತಿಳಿದರೂ ನನ್ನ ಗಮನಕ್ಕೆ ತನ್ನಿ. ಸಮಾಜದಲ್ಲಿ ಮನುಷ್ಯರು ಸಂವಿಧಾನಬದ್ಧವಾದ ಎಲ್ಲ ರೀತಿಯ ಹಕ್ಕುಗಳಿಂದ ಬದುಕುವ ಅವಕಾಶವನ್ನು ನಾವೆಲ್ಲರೂ ಕಲ್ಪಿಸಬೇಕಾಗಿದೆ. ಪ್ರತಿ ತಾಲೂಕಿನಲ್ಲಿ ಜೀತಗಾರಿಕೆ ಸಭೆಗಳನ್ನು ಅಧಿಕಾರಿಗಳು ಮತ್ತು ಸಮುದಾಯದೊಂದಿಗೆ ಆಯೋಜಿಸಬೇಕು. ಇಂತಹ ಸಮಸ್ಯೆಗಳು ಕಂಡು ಬಂದರೆ ಮಾಹಿತಿ ನೀಡಿ. ಯಾವುದೇ ಅಧಿಕಾರಿ ಜೀತಗಾರಿಕೆ ವಿಚಾರದಲ್ಲಿ ತಾತ್ಸಾರ, ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


ಎಚ್.ಡಿ.ಕೋಟೆಯ ಜೀವಿಕ ಸಂಸ್ಥೆಯ ಮುಖ್ಯಸ್ಥ ಬಸವರಾಜು ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸಹಾಯಕ ಕುಟುಂಬಗಳು ಜೀತಗಾರಿಕೆಯ ಕತ್ತಲೆಯ ಬದುಕಿನಲ್ಲಿವೆ. ಉಪವಿಭಾಗ ಮಟ್ಟದ ಎಲ್ಲ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಪಿಡಿಒ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರೆ ಜೀತಗಾರಿಕೆ ನಿರ್ಮೂಲನೆ ಮಾಡಬಹುದು ಎಂದು ಸಲಹೆ ನೀಡಿದರು.


ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ತಾಲೂಕಿನಲ್ಲಿ ಸುಮಾರು 23 ಜನರನ್ನು ಜೀತಗಾರಿಕೆಯಿಂದ ಬಿಡುಗಡೆಗೊಳಿಸಲಾಗಿದೆ. ಎಲ್ಲರೂ ಪರಿಶಿಷ್ಟ ಜಾತಿ, ಪಂಗಡದವರೇ ಆಗಿದ್ದಾರೆ. ಹುಣಸೂರು ನಗರದ ಗುಜರಿಗಳಲ್ಲಿ ಬಾಲ ಕಾರ್ಮಿಕರು ಕಂಡುಬರುತ್ತಿದ್ದಾರೆ. ಈ ಬಗ್ಗೆ ಕಾರ್ಮಿಕ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.ಡಿವೈಎಸ್‌ಪಿ ಮಹೇಶ್, ತಹಸೀಲ್ದಾರ್‌ಗಳಾದ ಸಣ್ಣರಾಮಪ್ಪ, ಕುಂಞ ಅಹಮ್ಮದ್, ತಿಮ್ಮಯ್ಯ, ಪರಶಿವಮೂರ್ತಿ, ಹುಣಸೂರು ಉಪತಹಸೀಲ್ದಾರ್ ಪಿ.ಪ್ರಸಾದ್, ಕೆ.ಆರ್.ನಗರ ತಾಪಂ ಇಒ ಸತೀಶ್, ಜೀವಿಕ ಸಂಸ್ಥೆಯ ಚಂದ್ರಶೇಖರ ಮೂರ್ತಿ, ಮಲ್ಲಿಗೆಮ್ಮ, ಒಕ್ಕೂಟದ ಮಹದೇವ್, ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಇತರರು ಹಾಜರಿದ್ದರು.

18 ಜನ ಜೀತ ವಿಮುಕ್ತರು: ಎಚ್.ಡಿ. ಕೋಟೆ ತಾಲೂಕಿನಲ್ಲಿ 18 ಜನ ಜೀತಗಾರರನ್ನು ಪತ್ತೆ ಮಾಡಿ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಜೀತಗಾರಿಕೆ ಮಾಡಿಸಿಕೊಳ್ಳುತ್ತಿದ್ದ ಮಾಲೀಕರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಬಿಡುಗಡೆಗೊಂಡವರಿಗೆ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಆದೇಶಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net