

ಎಚ್.ಡಿ.ಕೋಟೆ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಜೀತ ವಿಮುಕ್ತರಿಗೆ ಮಾಲೀಕರು ಜೀವ ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದರೂ ಅಲ್ಲಿನ ಜಿಲ್ಲಾಡಳಿತ ಯಾವುದೇ ಕ್ರಮವಹಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ತಾಲೂಕು ಆಡಳಿತಸೌಧ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬೆಳಗಾವಿ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
2019ರಲ್ಲಿ ರಾಮದುರ್ಗ ತಾಲೂಕು ಹಾಗೂ 2017ರಲ್ಲಿ ಬೈಲಹೊಂಗಲ ತಾಲೂಕಿನಲ್ಲಿ 17 ಜೀತದಾಳುಗಳಿಗೆ ಅಲ್ಲಿನ ಉಪವಿಭಾಗಾಧಿಕಾರಿ ಜೀತದಿಂದ ವಿಮುಕ್ತಿ ಮಾಡಿ ಅವರಿಗೆ ಬಿಡುಗಡೆ ಪತ್ರ ನೀಡಿದ್ದಾರೆ. 3 ರಿಂದ 5 ವರ್ಷ ಕಳೆದರೂ ಈವರಗೂ ಅವರಿಗೆ ನಯಾಪೈಸೆ ಪರಿಹಾರವಾಗಲಿ, ಪುನರ್ವಸತಿ ಸೌಲಭ್ಯವನ್ನಾಗಲಿ ಸರ್ಕಾರ ನೀಡದೆ ವಿಳಂಬ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಜಿಲ್ಲಾಡಳಿತ ವಿರುದ್ಧ ಪ್ರತಿಭಟನಾಕಾರರು ಹರಿಹಾಯ್ದರು.
ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಬಸವರಾಜು ಮಾತನಾಡಿ, 2016ರ ಎಸ್‌ಒಪಿ ಪ್ರಕಾರ ಜೀತದಾಳುಗಳಿಗೆ ಎಸಿ ಬಿಡುಗಡೆ ಪತ್ರ ನೀಡುವಾಗಲೇ ತಾತ್ಕಾಲಿಕವಾಗಿ 25,000 ರೂ. ಪರಿಹಾರ ಒದಗಿಸಬೇಕು ಎಂಬ ಕಾನೂನು ಜಾರಿಯಲ್ಲಿದೆ. ಅಲ್ಲದೆ 24 ಗಂಟೆಯೊಳಗೆ ಮಾಲೀಕರ ಮೇಲೆ ಎಫ್‌ಐ ಆರ್ ದಾಖಲಿಸಬೇಕೆಂದು ಆದೇಶವಿದ್ದರೂ ಪಾಲನೆಯಾಗಿಲ್ಲ. ಹಾಗಾಗಿ ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾನೂನನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಶಿರಸ್ತೇದಾರ್ ಮಹೇಶ್ ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹದೇವು, ಜೀವಿಕ ತಾಲೂಕು ಸಂಚಾಲಕ ಚಂದ್ರಶೇಖರ ಮೂರ್ತಿ, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಕೆ.ಎಂ.ಹಳ್ಳಿ ಸಣ್ಣಕುಮಾರ್, ಪುಟ್ಟಮಾದು ಕೋಟೆ, ಆನಗಟ್ಟಿ ದೇವರಾಜು, ಚಾ.ನಂಜುಂಡ ಮೂರ್ತಿ, ರೈತ ಸಂಘಟನೆಯ ರವಿಕುಮಾರ್, ಬಸವರಾಜು, ಸಿಪಿಎಂ ಅಕ್ಬರ್ ಪಾಷ, ಆದಿ ಕರ್ನಾಟಕ ಸಮಾಜದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಮುದ್ದಮಲ್ಲಯ್ಯ, ಶಿವಬುದ್ಧಿ, ಜಯಮ್ಮ ಇತರರಿದ್ದರು.