

ರಾಮನಗರ : ಜೀತ ಅನಿಷ್ಠ ಪದ್ಧತಿಯಾಗಿದ್ದು, ಇದರಿಂದ ಮುಕ್ತಗೊಂಡವರಲ್ಲಿ ಆತ್ಮಸ್ಥೈರ್ಯ ತುಂಬಿ ಸ್ವಾವಲಂಬಿಗಳಾಗಲು ಬೇಕಿರುವ ಸರ್ಕಾರದ ಸೌಲಭ್ಯವನ್ನು ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ರಾಮನಗರ ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜೀತಮುಕ್ತರ ಪುನರ್ವಸತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿವಿಧ ಇಲಾಖೆಗಳಲ್ಲಿ ಜೀತಮುಕ್ತರಿಗೆ ಸೌಲಭ್ಯಗಳು ದೊರೆಯುತ್ತದೆ. ಜೀತದಿಂದ ಮುಕ್ತಗೊಂಡಿರುವವರು ಧೈರ್ಯದಿಂದ ಮಾತನಾಡಬೇಕು. ತಮಗೆ ಬೇಕಿರುವ ಅಗತ್ಯಗಳ ಬಗ್ಗೆ ಚರ್ಚಿಸಬೇಕು. ಆಗ ಮಾತ್ರ ಅವರಿಗೆ ಸವಲತ್ತುಗಳನ್ನು ಒದಗಿಸಲು ಸಾಧ್ಯ. ಅವರು ತಮ್ಮ ಅಭಿರುಚಿಗೆ ತಕ್ಕಂತೆ ಸೌಲಭ್ಯ ಆಯ್ಕೆ ಮಾಡಿಕೊಂಡರೆ ಸ್ವಾಭಿಮಾನದಿಂದ ದುಡಿಮೆ ನಡೆಸಬಹುದು ಎಂದರು.
ಜಿಪಂ ಅಧ್ಯಕ್ಷ ಎಚ್. ಎನ್. ಅಶೋಕ್ ಮಾತನಾಡಿ, 18ನೇ ಶತಮಾನದಿಂದಲೂ ಜೀತ ಪದ್ಧತಿ ಕಾಣಬಹುದಾಗಿದೆ. ಇದು ಅಸ್ಪೃಶ್ಯತೆಗಿಂತ ಕೆಟ್ಟ ಪದ್ಧತಿಯಾಗಿದೆ. ಇದನ್ನು ಸಮಾಜದ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಜಿಪಂ ಉಪಾಧ್ಯಕ್ಷೆ ಜಯರತ್ನ, ಉಪಕಾರ್ಯದರ್ಶಿ ಉಮೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಲಲಿತಾಬಾಯಿ, ಮುಂತಾದವರು ಇದ್ದರು.
ಸೌಲಭ್ಯಗಳ ಪಟ್ಟಿ ಮಾಡಿ
ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮುಂತಾದ ಇಲಾಖೆಗಳಲ್ಲಿ ಜೀತಮುಕ್ತರಾದವರಿಗೆ ದೊರಕುವ ಯೋಜನೆಗಳ ಬಗ್ಗೆ ಚರ್ಚಿಸಲು ಸಭೆಯಲ್ಲಿ ಭಾಗವಹಿಸಿದ ಜೀತಮುಕ್ತರನ್ನು 5 ಗುಂಪುಗಳಾಗಿ ರಚಿಸಿ ಒಂದೊಂದು ಗುಂಪಿಗೆ ಒಬ್ಬರು ಅಧಿಕಾರಿಗಳನ್ನು ನೇಮಕ ಮಾಡಿದರು. ಅಧಿಕಾರಿಗಳು ಅವರೊಂದಿಗೆ ಚರ್ಚಿಸಿ ಅವರಿಗೆ ಬೇಕಿರುವ ಸೌಲಭ್ಯಗಳನ್ನು ಪಟ್ಟಿ ಮಾಡುವಂತೆ ಇಕ್ರಂ ತಿಳಿಸಿದರು.