ಜಿಲ್ಲೆಯಾದ್ಯಂತ ಹುತ್ತರಿ ಹಬ್ಬದ ಸಂಭ್ರಮ ಇಂದು

Published on

ನಾಪೋಕ್ಲು: ಹುತ್ತರಿ ಹಬ್ಬದ ಸಂಭ್ರಮಕ್ಕೆ ನಾಡು ಸಜ್ಜಾಗಿದೆ. ಡಿ.7ರಂದು ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ.
ಕೊಡಗಿನಾದ್ಯಂತ ಧಾನ್ಯಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳುವ ಹಬ್ಬ ಹುತ್ತರಿ ಹಬ್ಬ. ಕೊಡಗಿನಲ್ಲಿ ಭತ್ತದ ಬೆಳೆ ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತಿದ್ದರೆ ನಡುಕ ಹುಟ್ಟಿಸುವ ಚಳಿಯ ನಡುವೆ ಕೊಡಗಿನ ಹುತ್ತರಿ ಹಬ್ಬದ ಆಚರಣೆ. ಗಡಚಿಕ್ಕುವ ಪಟಾಕಿಗಳ ಸದ್ದು, ಮನೆಯಲ್ಲಿ ವಿಶೇಷ ತಿನಿಸುಗಳು, ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮನೆ ಮಂದಿಯೆಲ್ಲ ಸಂಭ್ರಮದಿಂದ ಪಾಲ್ಗೊಂಡು ಆಚರಿಸುವ ಹಬ್ಬ ಹುತ್ತರಿ ಹಬ್ಬ. ಕೊಡವ ನುಡಿಯ ಪುತ್ತರಿ(ಪುದಿಯ ಅರಿ) ಅಂದರೆ ಹೊಸ ಅಕ್ಕಿ. ಇದು ಕನ್ನಡದಲ್ಲಿ ಹುತ್ತರಿ ಎಂದಾಗಿದೆ. ವ್ಯವಸಾಯವನ್ನೇ ಮಾಡಿ ಬದುಕುವ ಬಹುತೇಕ ರೈತಾಪಿ ವರ್ಗ ಪೈರುಗಳು ಬೆಳೆದಾಗ ಶಾಸ್ತ್ರೋಕ್ತವಾಗಿ ಕುಯ್ದು ತಂದು ಮನೆಯನ್ನು ತುಂಬಿಸಿಕೊಳ್ಳುವುದೇ ಈ ಹಬ್ಬದ ವೈಶಿಷ್ಟೃ.
ಹುತ್ತರಿಗೆ ಸಮಯ ನಿಗದಿ: ಕೊಡಗಿನ ಸುಗ್ಗಿಯ ಹಬ್ಬ ಹುತ್ತರಿ ಹಬ್ಬವನ್ನು ಡಿ.7ರಂದು ಆಚರಿಸಲು ಪಾಡಿ ಶ್ರೀಇಗ್ಗುತ್ತಪ್ಪ ದೇಗುಲದಲ್ಲಿ ಇತ್ತೀಚೆಗೆ ದಿನ ನಿಗದಿಪಡಿಸಲಾಗಿದೆ.
ಕಕ್ಕಬೆ ಪಾಡಿ ಶ್ರೀಇಗ್ಗುತ್ತಪ್ಪ ದೇಗುಲದ ಆವರಣದಲ್ಲಿ ನಾಡಿನ ಹದಿಮೂರು ತಕ್ಕ ಮುಖ್ಯಸ್ಥರು, ದೇಗುಲದ ತಕ್ಕ ಮುಖ್ಯಸ್ಥರು ಭಕ್ತಜನ ಸಂಘದ ಪದಾಧಿಕಾರಿ, ಸದಸ್ಯರು, ಆಡಳಿತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಂಪ್ರದಾಯದಂತೆ ಅಮ್ಮಂಗೇರಿ ಜೋತಿಷಿಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತ್ತರಿ ದಿನ ಮತ್ತು ಆಚರಣೆಯ ಸಮಯವನ್ನು ನಿಗದಿಪಡಿಸಿದ್ದಾರೆ.
ಡಿ.7ರಂದು ರಾತ್ರಿ 7.20ಕ್ಕೆ ಪಾಡಿ ಶ್ರೀಇಗ್ಗುತ್ತಪ್ಪ ದೇಗುಲದಲ್ಲಿ ನೆರೆ ಕಟ್ಟುವುದು, 8.20ಕ್ಕೆ ಕದಿರು ತೆಗೆಯುವುದು ಹಾಗೂ ರಾತ್ರಿ 9.20ಕ್ಕೆ ಪ್ರಸಾದ ಸ್ವೀಕರಿಸಲು ಶುಭ ಘಳಿಗೆಯಾಗಿರುವುದನ್ನು ನಿರ್ಧರಿಸಲಾಗಿದೆ. ಸಂಪ್ರದಾಯದಂತೆ ಪಾಡಿ ಶ್ರೀಇಗ್ಗುತ್ತಪ್ಪದಲ್ಲಿ ಪ್ರಥಮವಾಗಿ ಹುತ್ತರಿ ಆಚರಣೆ ನಡೆದು ಬಳಿಕ ನಾಡಿನೆಲ್ಲೆಡೆ ಆಚರಿಸಲಾಗುತ್ತದೆ.

ಕದಿರು ತೆಗೆಯುವ ಸಂದರ್ಭ
ಕದಿರು ತೆಗೆಯುವ ಸಂದರ್ಭ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net