ಜಿಲ್ಲೆಯಲ್ಲಿ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸೇವೆ ಇಲ್ಲ / ಅಪಘಾತಗಳು ನಡೆದು ಒಂದು ಗಂಟೆಯಾದರೂ ಆಂಬುಲೆನ್ಸ್ ಇಲ್ಲದೆ ಗಾಯಾಳುಗಳ ನರಳಾಟ / ೧೦೮ ಆಂಬುಲೆನ್ಸ್ಗಳನ್ನು ಬೇರೆ ಪ್ರಕರಣಗಳಿಗೆ ಬಳಕೆ!

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಸಾರ್ವಜನಿಕರ ಆರೋಗ್ಯ ರಕ್ಷಣೆಗೆಂದು ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ. ತುರ್ತು ಖಾಯಿಲೆಗೆ ಒಳಗಾದ ರೋಗಿಗಳು ಮತ್ತು ಅಪಘಾತಕ್ಕೆ ತುತ್ತಾದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಕೋಲಾರ ಜಿಲ್ಲೆಯಲ್ಲಿ ಮಾತ್ರ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸೇವೆ ಸಿಗದೆ ಜನ ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿ ವ್ಯಾಪಕವಾಗಿ ಹರಡಿದೆ.

ರೋಗಿಗಳಿಗೆ ತುರ್ತು ಚಿಕಿತ್ಸೆಗೆಂದು ಯೋಜಿಸಲಾಗಿರುವ ೧೦೮ ಆಂಬುಲೆನ್ಸ್ ಸೇವೆ ಹಾಗೂ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರಿ ಆಂಬುಲೆನ್ಸ್ ವ್ಯವಸ್ಥೆ ಇದ್ದರೂ ಜನರಿಗೆ ಮಾತ್ರ ಸಕಾಲಕ್ಕೆ ಆಂಬುಲೆನ್ಸ್ ಸೇವೆ ಸಿಗುತ್ತಿಲ್ಲ. ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೭೫ ಹಾದು ಹೋಗುತ್ತಿದ್ದು, ಹೆದ್ದಾರಿಯಲ್ಲಿ ಪ್ರತಿನಿತ್ಯ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದರೆ ಅಪಘಾತವಾದ ತಕ್ಷಣ ಸಾರ್ವಜನಿಕರು ೧೦೮ ಸಂಖ್ಯೆಗೆ ಕರೆ ಮಾಡುತ್ತಾರೆ. ಆದರೆ ಅಪಘಾತವಾದ ಗಾಯಾಳುಗಳು ರಸ್ತೆಯಲ್ಲಿ ನರಳಾಡುತ್ತಿದ್ದರೂ ಗಂಟೆಗಳು ಕಾದರೂ ಆಂಬುಲೆನ್ಸ್ ಗಳು ಬಾರದೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆಗಳು ನಡೆಯುತ್ತಿವೆ.

ಗುರುವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ೭೫ ರ ಅರಾಭಿಕೊತ್ತನೂರು ಗೇಟ್ ಬಳಿ ನಡೆದ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನರಳಾಡಿ ನರಳಾಡಿ ನಂತರ ಪೊಲೀಸರು ಮತ್ತು ಸಾರ್ವಜನಿಕರು ಬೇರೆ ವ್ಯವಸ್ಥೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ನಿರ್ವಹಣೆಗೆಂದು ಪ್ರತಿ ವಾಹನದಿಂದ ನೂರಾರು ರೂಪಾಯಿ ಟೋಲ್ ಸಂಗ್ರಹ ಮಾಡುತ್ತಾರೆ. ಆದರೆ ಹೆದ್ದಾರಿಯಲ್ಲಿ ಅಪಘಾತಗಳು ನಡೆದಾಗ ಕನಿಷ್ಟ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಸೇವೆ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್ ಸೇವೆ ಕೊಟ್ಟಿದ್ದರೂ ರೋಗಿಗಳನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲು ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ ಬದಲಿಗೆ ೧೦೮ ಆಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳುತ್ತಿರುವುದರಿಂದ ಅದೇ ಸಮಯದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ೧೦೮ ಆಂಬುಲೆನ್ಸ್ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವು ಕೇಳಿಬರುತ್ತಿದೆ.

ತಲೆಗೆ ಬಲವಾದ ಪೆಟ್ಟು ಬಿದ್ದಂತಹ ಗಾಯಾಳುಗಳನ್ನು ನಿಮ್ಹಾನ್ಸ್ ಸೇರಿಸಲು, ಬೆಂಕಿ ಅಪಘಾತದ ಗಾಯಾಳುಗಳನ್ನು ವಿಕ್ಟೋರಿಯಾ ಸೇರಿಸಲು ಹಾಗೂ ಮಕ್ಕಳಿಗೆ ಸಮಸ್ಯೆ ಉಂಟಾದಲ್ಲಿ ಇಂದಿರಾಗಾAಧಿ ಆಸ್ಪತ್ರೆಗೆ ಸೇರಿಸಲು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳ ವೈದ್ಯರು ಗಾಯಾಳುಗಳನ್ನು ಸಾಗಿಸಲು ೧೦೮ ವಾಹನಗಳನ್ನೇ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಸ್ಥಳೀಯವಾಗಿ ಅಪಘಾತಗಳು ಸಂಭವಿಸಿದಾಗ ೧೦೮ ವಾಹನಗಳು ಲಭ್ಯವಿರುವುದಿಲ್ಲ. ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ಗಳನ್ನು ಬಳಸದೇ ೧೦೮ ವಾಹನಗಳನ್ನು ಬಳಸುತ್ತಿರುವುದರಿಂದ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆಂಬುದು ಹೆಸರು ಹೇಳಲು ಇಚ್ಛಿಸದ ೧೦೮ ವಾಹನ ಚಾಲಕರ ಆರೋಪ.

ಬಾಕ್ಸ್

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ೧೦೮ ವಾಹನ ಬಾರದೆ ಗಾಯಾಳುಗಳಿಗೆ ಚಿಕಿತ್ಸೆ ಕೊಡಲು ಆಗದೇ ಕಳೆದ ಒಂದೂವರೆ ತಿಂಗಳ ಹಿಂದೆ ಶ್ರೀನಿವಾಸಪುರ ವಲಯದ ಪುಂಗನೂರು ಕ್ರಾಸ್ ಸಮೀಪ ವ್ಯಕ್ತಿಯೊಬ್ಬ ಮೃತಪಟ್ಟ. ಗುರುವಾರ ಅರಾಭಿಕೊತ್ತನೂರು ಸಮೀಪ ಅಪಘಾತ ಸಂಭವಿಸಿದಾಗ ಸಮಯಕ್ಕೆ ೧೦೮ ಆಂಬುಲೆನ್ಸ್ ಆಗಮಿಸಿದ್ದರೆ ೩ ಪ್ರಾಣಗಳನ್ನು ಉಳಿಸಬಹುದಾಗಿತ್ತು. ಹೀಗೆ ಜಿಲ್ಲೆಯಲ್ಲಿ ಆಂಬುಲೆನ್ಸ್ ಸೇವೆ ಸಕಾಲಕ್ಕೆ ಇಲ್ಲದ ಕಾರಣ ತಡವಾಗಿ ಖಾಸಗಿ ವಾಹನಗಳಲ್ಲಿ ಗಾಯಾಳುಗಳನ್ನು ಸಾಗಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆಗಳು ನಡೆದಿವೆ.

ಕೋಟ್

ಅರಾಭಿಕೊತ್ತನೂರು ಗ್ರಾಮದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಆಗಾಗ ಹೆದ್ದಾರಿ ಬಳಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಪಘಾತ ಸಂಭವಿಸಿದಾಗಲೆಲ್ಲಾ ಆಂಬುಲೆನ್ಸ್ ಗೆ ಕರೆ ಮಾಡುತ್ತೇವೆ. ಕರೆ ಮಾಡಿ ಎಷ್ಟು ಸಮಯ ಕಾದರೂ ಆಂಬುಲೆನ್ಸ್ ಗಳು ಬಾರದೆ ಗಾಯಾಳುಗಳು ನರಳಾಡುತ್ತಿರುತ್ತಾರೆ ಅದನ್ನು ನೋಡಲಾಗದೆ ನಾವೇ ಆಟೋ ಸೇರಿದಂತೆ ಬೇರೆ ಬೇರೆ ವಾಹನ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಸೇರಿಸಲಾಗುವುದು.

-ಶ್ರೀಧರ್, ಗ್ರಾ.ಪಂ ಮಾಜಿ ಸದಸ್ಯ.

ಕೋಟ್

ಜಿಲ್ಲೆಯಲ್ಲಿ ೧೯ ಪ್ರಸ್ತುತ ೧೦೮ ಆಂಬುಲೆನ್ಸ್ಗಳು ಲಭ್ಯವಿವೆ. ಇದರಲ್ಲಿ ೧೪ ಆಂಬುಲೆನ್ಸ್ಗಳು ಹೊಸ ವಾಹನಗಳಾಗಿವೆ. ಇನ್ನು ೦೩ ಆಂಬುಲೆನ್ಸ್ಗಳು ಅವಶ್ಯಕತೆ ಇದೆ. ರೋಗಿಗಳನ್ನು ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯುವಾಗ ಸಮಯದ ಅಭಾವದಿಂದ ಕೆಲವೊಂದು ಬಾರಿ ಸೇವೆ ಸಿಗದಂತೆ ಆಗುತ್ತಿದೆ. ೩೫ ಕಿ.ಮೀ ಮಾತ್ರ ಸಂಚರಿಸಲು ೧೦೮ ವಾಹನಗಳಿಗೆ ಅನುಮತಿ ಇದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಬೆಂಗಳೂರಿಗೆ ಹತ್ತಿರವಿರುವುದರಿಂದ ಕೆಲವೊಂದು ತುರ್ತು ಪ್ರಕರಣಗಳಲ್ಲಿ ಸ್ಥಳೀಯ ಆಸ್ಪತ್ರೆಯ ವೈದ್ಯರು ೧೦೮ ವಾಹನಗಳ ಮೂಲಕವೇ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದಾರೆ. ನಮ್ಮ ವಾಹನ ಲಭ್ಯವಿಲ್ಲದಿದ್ದಲ್ಲಿ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್ಗೆ ಕರೆ ಮಾಡಿ ಕರೆಯಿಸಿಕೊಳ್ಳಬಹುದು. ಅನಗತ್ಯವಾಗಿ ನಮ್ಮ ವಾಹನ ನಿಲ್ಲುವುದಿಲ್ಲ. ನಿರಂತರ ಸೇವೆ ಮಾಡುತ್ತಿವೆ.

-ಶಿವಕುಮಾರ್ ೧೦೮ ಆಂಬುಲೆನ್ಸ್ ಸೇವೆಯ ಕೋ-ಆರ್ಡಿನೇಟರ್

ಚಿತ್ರ ೦೪ ಕೆ.ಎಲ್.ಆರ್. ೦೨ : ೧೦೮ ವಾಹನದ ಚಿತ್ರ

ಚಿತ್ರ ೦೪ ಕೆ.ಎಲ್.ಆರ್. ೦೨ಎ : ಶ್ರೀÃಧರ್, ಗ್ರಾ.ಪಂ ಮಾಜಿ ಸದಸ್ಯ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net