ಜಿಲ್ಲೆಯಲ್ಲಿ ದಿನವಿಡಿ ಮಳೆ

16
Published on

ಫೆಂಗಲ್ ಚಂಡಮಾರುತದ ಪರಿಣಾಮ ಸೋಮವಾರ ಜಿಲ್ಲೆಯಲ್ಲಿ ದಿನವಿಡಿ ಮಳೆಯಾಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಥರಗುಟ್ಟುವ ಥಂಡಿಯೊಂದಿಗೆ ನಿರಂತರ ಮಳೆ ಜನರು ಮನೆಯಿಂದ ಹೊರಬಾರದಂತೆ ಮಾಡಿತ್ತು. ಫೆಂಗಲ್ ಚಂಡಮಾರುತದ ಅಬ್ಬರ ಮೈಸೂರು ಜಿಲ್ಲೆಯ ಮೇಲೂ ತಟ್ಟಿದೆ. ಸೋಮವಾರ ಬೆಳಗ್ಗೆಯಿಂದಲೂ ಮಳೆ ಸುರಿದಿದ್ದು, ಜಿಲ್ಲಾದ್ಯಂತ ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿತ್ತು.

ಮಲೆನಾಡಿನಂತಾದ ಮೈಸೂರು: ದಿಢೀರ್ ಮಳೆಯಿಂದಾಗಿ ತಾಪಮಾನವೂ ಕೂಲ್ ಆಗಿತ್ತು. ಗರಿಷ್ಠ 24 ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ಇಳಿಕೆಯಾಗಿತ್ತು. ನಗರದಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಒಟ್ಟಾರೆ ಸೋಮವಾರ ಮೈಸೂರು ಮಲೆನಾಡಿನಂತೆ ಗೋಚರವಾಗಿದ್ದು ವಿಶೇಷ. ಇದರಿಂದ ಮನೆ ಮೂಲೆ ಸೇರಿದ್ದ ಸ್ವೆಟರ್, ಜರ್ಕಿನ್, ಕೈಗವಸುಗಳನ್ನು ಹೊರತೆಗೆದು ಧರಿಸಿಕೊಂಡ ಜನರು, ಚಳಿಯಿಂದ ರಕ್ಷಿಸಿಕೊಂಡು ಬೆಚ್ಚಗಾದರು. ಮಳೆ ಕಾರಣ ಸಾರ್ವಜನಿಕರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ದಿನವಿಡಿ ಮಳೆ ಸುರಿದ ಪರಿಣಾಮ, ತಗ್ಗು ಪ್ರದೇಶಕ್ಕೆ ನೀರು ನಿಂತಿದ್ದು ಕಂಡು ಬಂತು. ಸಂಜೆ ಕೊಂಚ ಕಾಲದ ಬಿಡುವಿನ ನಂತರ ಜಿಟಿಜಿಟಿ ಮಳೆ ಆಗೊಮ್ಮೆ, ಈಗೊಮ್ಮೆ ಜೋರಾಗಿ ಸುರಿಯಿತು. ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದ ಕಾರಣ ಸಂಚರಿಸಲು ವಾಹನ ಸವಾರರು ಹರಸಾಹಸಪಟ್ಟರು. ಮನೆಯಿಂದ ಹೊರ ಬಂದಿದ್ದ ಸಾಕಷ್ಟು ಜನ ಅಂಗಡಿ-ಮುಂಗಟ್ಟುಗಳಲ್ಲಿ ಆಶ್ರಯ ಪಡೆದು, ಮಳೆ ನಿಂತ ನಂತರ ತೆರಳಿದರು. ರಸ್ತೆ ಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು. ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಕೃಷಿ ಬೆಳೆ ಹಾಳಾಗುವ ಸಾಧ್ಯತೆ ಇದ್ದು, ಬೆಳೆಯ ಕಟಾವಿಗೂ ವಾತಾವರಣ ಅಡ್ಡಿಯಾಗಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

ತೀವ್ರ ಫಜೀತಿ ಅನುಭವಿಸಿದ ವ್ಯಾಪಾರಿಗಳು:

ಮಳೆಯಿಂದ ವಿದ್ಯಾರಣ್ಯಪುರಂ, ಕುವೆಂಪುನಗರ, ಜೆ.ಪಿ.ನಗರ, ಅಗ್ರಹಾರ, ಶಾರದಾದೇವಿನಗರ, ಬೋಗಾದಿ, ಕನಕದಾಸನಗರ, ಜನತಾನಗರ, ನಗರದ ಹೃದಯಭಾಗ ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ಶಿವರಾಂಪೇಟೆ, ಡಿ.ದೇವರಾಜ ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆ ಸೇರಿದಂತೆ ಹಲವೆಡೆ ಸಾರ್ವಜನಿಕರು ತೊಂದರೆ ಅನುಭವಿಸಿದರು. ನಗರದ ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತೀವ್ರ ಫಜೀತಿ ಅನುಭವಿಸಿದರು. ಹಣ್ಣು-ತರಕಾರಿ ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಯಿತು. ಸಯ್ಯಜಿರಾವ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಬಟ್ಟೆ ವ್ಯಾಪಾರಿಗಳು, ಪಾನೀಪುರಿ, ಗೋಬಿ ಸೇರಿದಂತೆ ಹಲವು ಚಾಟ್ ಸೆಂಟರ್ ಮಾಲೀಕರು ಟಾರ್ಪಾಲ್ ಕಟ್ಟಿಕೊಂಡು ಕೆಲ ಸಮಯ ವ್ಯಾಪಾರ ಮಾಡಿದರು. ಇನ್ನೂ ಎರಡು ದಿನ ಇದೇ ರೀತಿ ವಾತಾವರಣ ಮುಂದುವರಿಯಲಿದೆ. ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರವಾಸಿಗರಿಗೆ ಆಸೆಗೆ ತಣ್ಣೀರು:

ಸೋಮವಾರ ಅರಮನೆ ನೋಡಲು ನೂರಾರು ಜನರು ಆಗಮಿಸಿದ್ದರು. ಬೆಳಗ್ಗೆಯೇ ಅರಮನೆ ಆವರಣದಲ್ಲಿ ನೆರೆದಿದ್ದರು. ಆದರೆ, ಪ್ರವಾಸಿಗರು ನೆಮ್ಮದಿಯಿಂದ ಅರಮನೆ ವೀಕ್ಷಣೆಗೆ ಮಾಡಲು ಮಳೆ ತಣ್ಣೀರು ಎರಚಿತು. ಪ್ರವಾಸಿಗರು ಕೊಡೆ ಹಿಡಿದುಕೊಂಡೇ ಅರಮನೆ ಆವರಣ ಸುತ್ತಿದರು. ಮಳೆಯಿಂದಾಗಿ ಗ್ರಾಮಾಂತರ ಬಸ್ ನಿಲ್ದಾಣದ ಮುಂದೆ ಹಾದು ಹೋಗಿರುವ ಬೆಂಗಳೂರು- ನೀಲಗಿರಿ ಹೆದ್ದಾರಿಯು ಕೆಸರು ಗುಂಡಿಯಂತೆ ಆಗಿತ್ತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net