

ಮಾಗಡಿ : ಆನೆಗೆ ಆಹಾರ ನೀಡಲು ಹೋದವನು ಆನೆ ದಾಳಿಯಿಂದ ಮೃತಪಟ್ಟಿದ್ದಾನೆ. ತಾಲೂಕಿನ ಅಗಲಕೋಟೆ ಹ್ಯಾಂಡ್‌ಪೋಸ್ಟ್ ಬಳಿ ಬುಧವಾರ ಅನಾಹುತ ಸಂಭವಿಸಿದ್ದು ದೊಣ್ಣಕುಪ್ಪೆ ಗ್ರಾಮದ ಗಂಗಾಧರ (48) ಮೃತ.
ಈತ ಹ್ಯಾಂಡ್‌ಪೋಸ್ಟ್ ಬಳಿಯ ಸಿಮೆಂಟ್ ಅಂಗಡಿ ಕಾರ್ಮಿಕ. ಇಂದು ಕೆಲಸಕ್ಕೆ ತೆರಳದೆ ಆನೆ ಓಡಿಸುವ ಕಾರ್ಯಾಚರಣೆ ವೀಕ್ಷಿಸಲು ತೆರಳಿದ್ದಾಗ ಆನೆ ದಾಳಿಗೆ ತುತ್ತಾಗಿದ್ದಾನೆ.
ಸಾವನದುರ್ಗ ಅರಣ್ಯ ಪ್ರದೇಶದಿಂದ ಬಂದಿರುವ ಒಂಟಿ ಸಲಗ ಬೆಳಗ್ಗೆ ದೊಣಕುಪ್ಪೆ, ಮಠದ ಪಾಳ್ಯ ಆಗಲಕೋಟೆ ಹ್ಯಾಂಡ್‌ಪೋಸ್ಟ್ ಬಳಿ ಪ್ರತ್ಯಕ್ಷವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಜನರು ಮನೆಯಿಂದ ಹೊರಬರದಂತೆ ಅರಿವು ಮೂಡಿಸಿದ್ದಾರೆ. ಆನೆಯನ್ನು ಅರಣ್ಯಪ್ರದೇಶಕ್ಕೆ ಓಡಿಸಲು ಪಟಾಕಿ ಸಿಡಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಮಧ್ಯಾಹ್ನ ಊಟ ಮಾಡುವ ವೇಳೆ ಕಾರ್ಯಾಚರಣೆ ವೀಕ್ಷಿಸಲು ಬಂದಿದ್ದ ಗಂಗಾಧರ ಊಟ ಮಾಡುವ ನೆಪದಲ್ಲಿ ಸಿಬ್ಬಂದಿಯಿಂದ ಆಹಾರ ಪಡೆದು ಕಣ್ತಪ್ಪಿಸಿ ಆನೆ ಇದ್ದ ಸ್ಥಳಕ್ಕೆ ತೆರಳಿ ಆಹಾರ ನೀಡುವ ವೇಳೆ ದಾಳಿ ಮಾಡಿದೆ.
ಕಾರ್ಯಾಚರಣೆ ವೇಳೆ ಗಂಗಾಧರ ಅರಣ್ಯ ಇಲಾಖೆ ಸಿಬ್ಬಂದಿಗೆ ಕಿರಿಕಿರಿ ಮಾಡುತ್ತಿದ್ದ. ಮನೆಗೆ ಹೋಗುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೇಳಲಿಲ್ಲ. ಮೃತ ಗಂಗಾಧರನ ಮೊದಲ ಹೆಂಡತಿ ಮೃತಪಟ್ಟಿದ್ದು, ಎರಡನೇ ಮದುವೆಯಾಗಿದ್ದಾನೆ. ಒಟ್ಟು 3 ಮಕ್ಕಳಿದ್ದಾರೆ. ಗಂಗಾಧರ ದೊಣ್ಣಕುಪ್ಪೆ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಈತನನ್ನೇ ಅವಲಂಬಿಸಿದ್ದ ಕುಟುಂಬ ಈಗ ಅನಾಥವಾಗಿದೆ.
ಡಿಎಫ್‌ಒ ದೇವರಾಜು, ಎಸಿಎಫ್ ಸುಧೀಂದ್ರ, ಆರ್‌ಎಫ್‌ಓಗಳಾದ ಬಿಆರ್‌ಡಿ ಜಗದೀಶ್ ಗೌಡ, ಮನ್ಸೂರ್, ಡಿವೈಎಸ್‌ಪಿ ಓಂಪ್ರಕಾಶ್, ಸಿಪಿಐ ರವಿ, ಪಿಎಸ್‌ಐ ಶ್ರೀಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಜಮೀನಿನಲ್ಲಿ ರೇಷ್ಮೆ ಸೊಪ್ಪು ಕೀಳುತ್ತಿದ್ದ ರೈತನ ದುರಂತ ಅಂತ್ಯ
ಕನಕಪುರ : ಕಸಬಾ ಹೋಬಳಿ ಚಿಕ್ಕಬೆಟ್ಟಹಳ್ಳಿಯಲ್ಲಿ ಬುಧವಾರ ಬೆಳಗ್ಗೆ ಕಾಡಾನೆ ದಾಳಿಗೆ ರೈತ ಮೃತಪಟ್ಟಿದ್ದಾರೆ. ಗ್ರಾಮದ ರುದ್ರೇಗೌಡ (50) ಮೃತ.
ಬೆಳಗ್ಗೆ 6.30ರಲ್ಲಿ ಗ್ರಾಮದ ಬಳಿಯ ಜಮೀನಿನಲ್ಲಿ ರೇಷ್ಮೆಸೊಪ್ಪು ಕೀಳುತ್ತಿದ್ದಾಗ ದುರಂತ ಸಂಭವಿಸಿದೆ. ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯಧಿಕಾರಿ ಪ್ರಶಾಂತ್ ಮತ್ತು ಸಿಬ್ಬಂದಿ ಭೇಟಿ ನೀಡಿದಾಗ ಗ್ರಾಮಸ್ಥರು ಘೇರಾವ್ ಮಾಡಿದರು. ಆನೆ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಿಮ್ಮನ್ನು ಇಲ್ಲಿಂದ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಕೃಷ್ಣಮೂರ್ತಿ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.
ಸ್ಥಳದಲ್ಲಿಯೇ ಅರಣ್ಯ ಇಲಾಖೆಯ ಅಧಿಕಾರಿಗಳು 2.5 ಲಕ್ಷ ರೂ. ಪರಿಹಾರ ನೀಡಿ, ಉಳಿದ ಹಣವನ್ನು ಶೀಘ್ರವಾಗಿ ಕೊಡಿಸುವುದಾಗಿ ಭರವಸೆ ನೀಡಿ, ಆನೆ ಹಾವಳಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆನೆ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪಟಾಕಿ ಸಿಡಿಸಿ ಆನೆಯನ್ನು ಎಲ್ಲೂ ಚಲಿಸದಂತೆ ಮಾಡಲಾಗಿತ್ತು. ಸಿಬ್ಬಂದಿ ಊಟ ಮಾಡುವ ವೇಳೆ ಆನೆಗೆ ಊಟ ನೀಡಲು ತೆರಳಿದಾಗ ಘಟನೆ ನಡೆದಿದೆ. ಆನೆಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಓಡಿಸಲಾಗುವುದು. ಬಿಆರ್‌ಡಿ ಜಗದೀಶ್ ಗೌಡ ಆರ್‌ಎಫ್‌ಒ